ಬೀಜಿಂಗ್: ಭಾರತಕ್ಕೆ ಎನ್ಎಸ್ ಜಿ ಸದಸ್ಯತ್ವ ತಪ್ಪುವಂತೆ ಮಾಡುತ್ತಿರುವ ಏಕೈಕ ರಾಷ್ಟ್ರ ಚೀನಾ ಆಗಿದ್ದು, ಹೊರಗಿನ ದೇಶ ಉಂಟು ಮಾಡುತ್ತಿರುವ ಅಡಚಣೆಯನ್ನು ತ್ವರಿತವಾಗಿ ಬಗೆಹರಿಸಬೇಕೆಂಬ ಅಮೆರಿಕ ಹೇಳಿಕೆಗೆ ಚೀನಾ ತೀಕ್ಷ್ಣ ಪ್ರತಿಕ್ರಿಯೆ ನೀಡಿದೆ.
ಎನ್ ಪಿಟಿ ಒಪ್ಪಂದಕ್ಕೆ ಸಹಿ ಹಾಕದ ರಾಷ್ಟ್ರಗಳಿಗೆ ಎನ್ಎಸ್ ಜಿ ಸದಸ್ಯತ್ವವನ್ನು ಒಂದು ರಾಷ್ಟ್ರ ಮತ್ತೊಂದು ರಾಷ್ಟ್ರಕ್ಕೆ ನೀಡುವ ಬೀಳ್ಕೊಡುಗೆಯ ಉಡುಗೊರೆಯನ್ನಾಗಿಸಲು ಸಾಧ್ಯವಿಲ್ಲ ಎಂದು ಚೀನಾ ಅಮೆರಿಕಾಗೆ ತಿರುಗೇಟು ನೀಡಿದೆ. ಜ.20 ರಂದು ಅಧಿಕೃತವಾಗಿ ಅಧಿಕಾರದಿಂದ ಕೆಳಗಿಳಿಯಲಿರುವ ಅಮೆರಿಕಾದ ಅಧ್ಯಕ್ಷ ಬರಾಕ್ ಒಬಾಮ ಆಡಳಿತ ಜ.15 ರಂದು ಭಾರತದ ಎನ್ಎಸ್ ಜಿ ಸದಸ್ಯತ್ವಕ್ಕೆ ತಡೆಯೊಡ್ಡುತ್ತಿರುವ ಏಕೈಕ ರಾಷ್ಟ್ರ ಚೀನಾ ಆಗಿದ್ದು, ಸಮಸ್ಯೆಯನ್ನು ತ್ವರಿತವಾಗಿ ಬಗೆಹರಿಸಬೇಕೆಂದು ಅಭಿಪ್ರಾಯಪಟ್ಟಿತ್ತು. ಅಷ್ಟೇ ಅಲ್ಲದೇ ಚೀನಾವನ್ನು ಮಿತ್ರ ರಾಷ್ಟ್ರ ಅಲ್ಲ, ಹೊರಗಿನ ರಾಷ್ಟ್ರ ಎಂಬ ಅರ್ಥ ಬರುವ ರೀತಿಯಲ್ಲಿ ಸಂಬೋಧಿಸಿತ್ತು. ಈ ಹಿನ್ನೆಲೆಯಲ್ಲಿ ಕೆಂಡಾಮಂಡಲವಾಗಿರುವ ಚೀನಾ ಒಂದೆರಡು ದಿನಗಳಲ್ಲಿ ಮುಕ್ತಾಯವಾಗಲಿರುವ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಆಡಳಿತದ ಭಾರತದ ಎನ್ಎಸ್ ಜಿ ಸದಸ್ಯತ್ವದ ಪರ ನಿಲುವನ್ನು ನಿರಾಕರಿಸಿದ್ದು, ಸದಸ್ಯತ್ವವನ್ನು ಒಂದು ರಾಷ್ಟ್ರ ಮತ್ತೊಂದು ರಾಷ್ಟ್ರಕ್ಕೆ ಬೀಳ್ಕೊಡುಗೆ ಉಡುಗೊರೆಯನ್ನಾಗಿ ನೀಡುವಂತೆ ಮಾಡಲು ಸಾಧ್ಯವಿಲ್ಲ ಎಂದಿದೆ.
ಎನ್ ಪಿಟಿ ಒಪ್ಪಂದಕ್ಕೆ ಸಹಿ ಹಾಕದ ರಾಷ್ಟ್ರಗಳಿಗೆ ಎನ್ಎಸ್ ಜಿ ಸದಸ್ಯತ್ವ ನೀಡಲು ಸಾಧ್ಯವಿಲ್ಲ ಎಂಬ ಒಂದು ಅಂಶವನ್ನಿಟ್ಟುಕೊಂಡು ಕಳೆದ ವರ್ಷದಿಂದ ಭಾರತದ ಎನ್ಎಸ್ ಜಿ ಸದಸ್ಯತ್ವಕ್ಕೆ ಚೀನಾ ನಿರಂತರವಾಗಿ ಅಡ್ಡಗಾಲು ಹಾಕುತ್ತಿದೆ. ಇನ್ನು ಮಸುದ್ ಅಜರ್ ಗೆ ವಿಶ್ವಸಂಸ್ಥೆ ನಿಷೇಧ ವಿಧಿಸುವ ವಿಚಾರದಲ್ಲೂ ಭಾರತದ ಯತ್ನವನ್ನು ವಿಫಲಗೊಳಿಸುತ್ತಿರುವ ನಡೆಗೆ ಫ್ರಾನ್ಸ್ ನಿಂದ ವ್ಯಕ್ತವಾದ ಟೀಕೆಗೆ ಪ್ರತಿಕ್ರಿಯೆ ನೀಡಿರುವ ಚೀನಾ ವಿದೇಶಾಂಗ ಸಚಿವಾಲಯದ ವಕ್ತಾರರಾದ ಹುವಾ ಚುನ್ ಯಿಂಗ್, ಮಸೂದ್ ಅಜರ್ ಗೆ ವಿಶ್ವಸಂಸ್ಥೆಯ ಮೂಲಕ ನಿರ್ಬಂಧ ವಿಧಿಸುವ ಸಂಬಂಧ ಸೂಕ್ತ ಸಾಕ್ಷ್ಯಾಧಾರಗಳನ್ನು ಕೇಳುತ್ತಿದ್ದೇವೆ ಎಂದು ಹೇಳಿದ್ದಾರೆ.