ವಿದೇಶ

ಪಾಕಿಸ್ತಾನದಲ್ಲಿ ಅಟ್ಟಹಾಸ ಮೆರೆದ ಉಗ್ರರು: ಆತ್ಮಾಹುತಿ ಬಾಂಬ್ ದಾಳಿಗೆ 26 ಮಂದಿ ಬಲಿ

Srinivasamurthy VN

ಲಾಹೋರ್: ಉಗ್ರಗಾಮಿಗಳ ಸ್ವರ್ಗ ಪಾಕಿಸ್ತಾನದಲ್ಲಿ ಮತ್ತೆ ಭಯೋತ್ಪಾದಕರು ಅಟ್ಟಹಾಸ ಮೆರೆದಿದ್ದು, ಆತ್ಮಾಹುತಿ ಬಾಂಬ್ ದಾಳಿಗೆ 26 ಮಂದಿ ಬಲಿಯಾಗಿದ್ದಾರೆ ಎಂದು ತಿಳಿದುಬಂದಿದೆ.

ಪೂರ್ವ ಪಾಕಿಸ್ತಾನದ ಲಾಹೋರ್ ನಗರದಲ್ಲಿರುವ ಪಂಜಾಬ್ ಪ್ರಾಂತ್ಯದ ಮುಖ್ಯಮಂತ್ರಿ ಶಹಬಾಜ್ ಶರೀಫ್ ನಿವಾಸದ ಬಳಿ ಸೋಮವಾರ ಆತ್ಮಾಹುತಿ ಬಾಂಬ್ ದಾಳಿ ಸಂಭವಿಸಿದ್ದು, ಅರ್ಫಾ ಕರೀಂ ಸಾಫ್ಟ್ ವೇರ್ ಟೆಕ್ನಾಲಜಿ  ಪಾರ್ಕ್ ಬಳಿಯಲ್ಲಿರುವ ಜನನಿಬಿಡ ಮಾರುಕಟ್ಟೆಯ ಬಳಿ ಪ್ರಬಲ ಬಾಂಬ್ ದಾಳಿ ನಡೆದಿದೆ. ಪಾಕ್ ಪ್ರಧಾನಿ ನವಾಜ್ ಶರೀಫ್ ಅವರ ಸಹೋದರ ಶಹಬಾತ್ ಶರೀಫ್ ಅವರ ಮನೆ ಘಟನಾ ಸ್ಥಳದಿಂದ ಕೇವಲ 100 ಮೀಟರ್  ದೂರದಲ್ಲಿದೆ. ಈ ಬಾಂಬ್ ದಾಳಿಯಲ್ಲಿ ಕನಿಷ್ಠ 26 ಮಂದಿ ಸಾವಿಗೀಡಾಗಿದ್ದು, 56 ಮಂದಿಗೆ ಗಾಯಗಳಾಗಿವೆ. ಈ ಪೈಕಿ ಹಲವರ ಸ್ಥಿತಿ ಚಿಂತಾಜನಕವಾಗಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಏರಿಕೆಯಾಗುವ ಭೀತಿ ಇದೆ.

ಪ್ರಮುಖವಾಗಿ ಪೊಲೀಸರನ್ನು ಗುರಿಯಾಗಿರಿಸಿ ಈ ಬಾಂಬ್ ದಾಳಿ ನಡೆಸಲಾಗಿದ್ದು, ಇದೊಂದು ಆತ್ಮಾಹುತಿ ದಾಳಿ ಎಂದು ಲಾಹೋರ್ ಪೊಲೀಸ್ ಮುಖ್ಯಸ್ಥ ಅಮೀನ್ ವಾಯಿನ್ಸ್ ಹೇಳಿದ್ದಾರೆ. ಪೊಲೀಸ್ ಮೂಲಗಳ ಪ್ರಕಾರ ಬಾಂಬ್  ಸ್ಫೋಟದಲ್ಲಿ ಪೊಲೀಸರು ಸೇರಿದಂತೆ 26 ಮಂದಿ ಈ ದಾಳಿಯಲ್ಲಿ ಹತರಾಗಿದ್ದಾರೆ. ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗಳಿಗೆ ರವಾನಿಸಲಾಗಿದ್ದು. ಚಿಕಿತ್ಸೆ ನೀಡಲಾಗುತ್ತಿದೆ.

ಇಲ್ಲಿಯವರೆಗೆ ಯಾವುದೇ ಸಂಘಟನೆಗಳು ದಾಳಿಯ ಹೊಣೆ ಹೊತ್ತಿಲ್ಲ.

SCROLL FOR NEXT