ವಾಷಿಂಗ್ಟನ್: ಭಾರತದ ಬದ್ಧ ವೈರಿ ಪಾಕಿಸ್ತಾನಕ್ಕೆ ನೀಡಲಾಗುತ್ತಿದ್ದ 350 ಮಿಲಿಯನ್ ಡಾಲರ್ ನೆರವನ್ನು ತಡೆ ಹಿಡಿದಿರುವ ಅಮೆರಿಕ ರಕ್ಷಣಾ ಕಾರ್ಯದರ್ಶಿಯ ಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿರುವ ಅಮೆರಿಕ ಕಾಂಗ್ರೆಸ್ ಸಂಸದ ಟೆಡ್ ಪೋ ಅವರು, ಪಾಕಿಸ್ತಾನ ಬೆನ್ನಿಗೆ ಚೂರಿ ದೇಶ ಎಂದು ಸೋಮವಾರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪಾಕಿಸ್ತಾನಕ್ಕೆ ಆರ್ಥಿಕ ನೆರವನ್ನು ತಡೆಹಿಡಿದಿರುವ ಅಮೆರಿಕ ರಕ್ಷಣಾ ಕಾರ್ಯದರ್ಶಿ ಜೇಮ್ಸ್ ಮಾಟ್ಟೀಸ್ ನಿರ್ಧಾರವನ್ನು ತಾವು ಸ್ವಾಗತಿಸುವುದಾಗಿ ಟೆಡ್ ಟ್ವೀಟ್ ಮಾಡಿದ್ದಾರೆ. ಅಲ್ಲದೆ ಪಾಕಿಸ್ತಾನ ಹಲವಾರು ಭಯೋತ್ಪಾದನಾ ಸಂಘಟನೆಗಳಿಗೆ ಬೆಂಬಲ ನೀಡುತ್ತಿದೆ. ಅಷ್ಟೇ ಅಲ್ಲ ತನ್ನ ನೆಲದಲ್ಲಿ ಉಗ್ರರಿಗೆ ಆಶ್ರಯ ನೀಡುವ ಮೂಲಕ ನೆರೆಯ ದೇಶಗಳಿಗೆ ಅಪಾಯಕಾರಿಯಾಗಿ ಬೆಳೆಯುತ್ತಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಟೆಡ್ ಪೋ ಅವರು ಅಮೆರಿಕ ಸಂಸತ್ ನ ಟೆಕ್ಸಾಸ್ ಪ್ರತಿನಿಧಿಯಾಗಿದ್ದಾರೆ. ಹಕ್ಕಾನಿ ನೆಟ್ ವರ್ಕ್ ವಿರುದ್ಧ ಬೆನ್ನಿಗೆ ಚೂರಿ ಹಾಕುವ ಪಾಕಿಸ್ತಾನ ಯಾವ ರೀತಿ ಸೂಕ್ತ ಕ್ರಮ ಕೈಗೊಂಡಿದೆ ಎಂಬುದನ್ನು ರಾಷ್ಟ್ರೀಯ ರಕ್ಷಣಾ ಅಧಿಕಾರ ಕಾಯ್ದೆ ಕರಾರುವಕ್ಕಾಗಿ ಪರಿಶೀಲಿಸುವ ಅಗತ್ಯವಿದೆ ಎಂದು ಟ್ವೀಟ್ ನಲ್ಲಿ ವಿವರಿಸಿದ್ದಾರೆ.