ಕ್ವೆಟ್ಟಾ: ಪಾಕಿಸ್ತಾನದಲ್ಲಿದ್ದ ಚೀನಾದ ಇಬ್ಬರು ಶಿಕ್ಷಕರನ್ನು ಅಪಹರಿಸಿ ಹತ್ಯೆ ಮಾಡಿರುವುದಾಗಿ ಇಸ್ಲಾಮಿಕ್ ಉಗ್ರ ಸಂಘಟನೆ ಹೇಳಿದೆ.
ಚೀನಾ ಪಾಕಿಸ್ತಾನ ಎಕಾನಾಮಿಕ್ ಕಾರಿಡಾರ್ ಯೋಜನೆ(ಸಿಪಿಇಸಿ) ಗಾಗಿ ಚೀನಾ ಪಾಕಿಸ್ತಾನದೊಂದಿಗೆ ನಿಕಟವಾಗಿ ಕಾರ್ಯನಿರ್ವಹಿಸುತ್ತಿದ್ದು, ಪಾಕ್ ನಲ್ಲಿರುವ ತನ್ನ ನೌಕರರ ಭದ್ರತೆಗೆ ಹೆಚ್ಚಿನ ಆದ್ಯತೆ ನೀಡುತ್ತಿದೆ. ಆದರೆ ಈ ಘಟನೆ ಚೀನಾವನ್ನು ವಿಚಲಿತಗೊಳಿಸಿದ್ದು, ಚೀನಾದ ಮುಂದಿನ ನಡೆ ಕುತೂಹಲ ಮೂಡಿಸಿದೆ.
ತನ್ನ ಪರಮಾಪ್ತ ರಾಷ್ಟ್ರದಲ್ಲಿ ತನ್ನದೇ ಇಬ್ಬರು ಪ್ರಜೆಗಳನ್ನು ಉಗ್ರರು ಅಪಹರಿಸಿ ಕೊಂದಿರುವ ವರದಿಗಳ ಬಗ್ಗೆ ಪ್ರತಿಕ್ರಿಯೆ ನೀಡಿರುವ ಚೀನಾ, ಶಿಕ್ಷಕರನ್ನು ಅಪಹರಿಸಿ ಹತ್ಯೆ ಮಾಡಿರುವುದರ ಬಗೆಗಿನ ವರದಿ ಆತಂಕಕಾರಿಯಾಗಿದೆ. ಬಲೂಚಿಸ್ತಾನ ಪ್ರಾಂತ್ಯದಲ್ಲಿ ಚೀನಾ ಶಿಕ್ಷಕರನ್ನು ಅಪಹರಣ ಮಾಡಿ ಹತ್ಯೆ ಮಾಡಿರುವುದು ನಿಜವೇ ಎಂಬ ಬಗ್ಗೆ ಮಾಹಿತಿ ಕಲೆಹಾಕುತ್ತಿದ್ದೇವೆ ಎಂದು ಚೀನಾ ವಿದೇಶಾಂಗ ಸಚಿವಾಲಯ ಹೇಳಿದೆ.
ಅಪಹರಣಕ್ಕೊಳಗಾಗಿರುವ ಚೀನಾದ ಶಿಕ್ಷಕರನ್ನು ರಕ್ಷಿಸಲು ಯತ್ನಿಸುತ್ತಿದ್ದೇವೆ, ಅಷ್ಟೇ ಅಲ್ಲದೇ ಅವರನ್ನು ಹತ್ಯೆ ಮಾಡಿರುವ ಬಗೆಗಿನ ವರದಿ ನಿಜವೇ ಎಂಬುದನ್ನು ತಿಳಿದುಕೊಳ್ಳಲು ಯತ್ನಿಸುತ್ತಿದ್ಡೇವೆ ಎಂದು ಚೀನಾ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿದೆ. ಘಟನೆಗೆ ಸಂಬಂಧಿಸಿದಂತೆ ಚೀನಾ ಹೇಳಿಕೆ ನೀಡಿದೆಯಾದರೂ ಪಾಕಿಸ್ತಾನದ ಆಂತರಿಕ ಸಚಿವಾಲಯ ಹಾಗೂ ವಿದೇಶಾಂಗ ಸಚಿವಾಲಯ ಈ ವರೆಗೂ ಹೇಳಿಕೆ ನೀಡಿಲ್ಲ.