ವಿದೇಶ

ವಿಜಯ್ ಮಲ್ಯ ಹಸ್ತಾಂತರ ಪ್ರಕರಣ: ಮದ್ಯದ ದೊರೆಗೆ ಡಿಸೆಂಬರ್ 4ರವರೆಗೆ ಜಾಮೀನು

Lingaraj Badiger
ಲಂಡನ್: ವಿವಿಧ ರಾಷ್ಟ್ರೀಯ ಬ್ಯಾಂಕ್ ಗಳಿಂದ ಸಾವಿರಾರು ಕೋಟಿ ರುಪಾಯಿ ಸಾಲ ಪಡೆದು ವಿದೇಶಕ್ಕೆ ಪರಾರಿಯಾಗಿರುವ ಮದ್ಯದ ದೊರೆ ವಿಜಯ್ ಮಲ್ಯ ಅವರಿಗೆ ಹಸ್ತಾಂತರ ಪ್ರಕರಣಕ್ಕೆ ಸಂಬಂಧಿಸಿದಂತೆ ಲಂಡನ್ ಕೋರ್ಟ್ ಮಂಗಳವಾರ ಜಾಮೀನು ಮಂಜೂರು ಮಾಡಿದೆ.
ವಿಜಯ್ ಮಲ್ಯ ಅವರನ್ನು ಭಾರತಕ್ಕೆ ಹಸ್ತಾಂತರಿಸುವ ಕುರಿತು ಇಂದು ಎರಡನೇ ಬಾರಿ ವಿಚಾರಣೆ ನಡೆಸಿದ ಲಂಡನ್ ವೆಸ್ಟ್ ಮಿನಿಸ್ಟರ್ಸ್ ಮ್ಯಾಜಿಸ್ಟ್ರೇಟ್ ಕೋರ್ಟ್, ಆರೋಪಿ ಸಾಲದ ದೊರೆಗೆ ಡಿಸೆಂಬರ್ 4ರವರೆಗೆ ಜಾಮೀನು ನೀಡಿ, ವಿಚಾರಣೆಯನ್ನು ಜುಲೈ 6ಕ್ಕೆ ಮುಂದೂಡಿದೆ.
ಇಂದು ಕೋರ್ಟ್ ಗೆ ಹಾಜರಾಗುವ ಮುನ್ನ ಮಾಧ್ಯಮದೊಂದಿಗೆ ಮಾತನಾಡಿದ ವಿಜಯ್ ಮಲ್ಯ ಅವರು,ನ್ಯಾಯಾಲಯದಲ್ಲಿ ವಿಚಾರಣೆ ಪ್ರಕ್ರಿಯೆ ನಡೆಯುತ್ತಿದೆ. ಎಲ್ಲ ಆರೋಪಗಳನ್ನು ನಾನು ಈಗಾಗಲೇ ನಿರಾಕರಿಸಿದ್ದೇನೆ. ಮುಂದೆಯೂ ಆರೋಪಗಳನ್ನು ನಿರಾಕರಿಸಲಿದ್ದೇನೆ. ನಾನು ನಿರಪರಾಧಿ ಎಂಬುದನ್ನು ಸಾಬೀತುಪಡಿಸಲು ನನ್ನ ಬಳಿ ಸಾಕಷ್ಟು ಸಾಕ್ಷ್ಯಗಳಿವೆ ಎಂದರು.
13 ಬ್ಯಾಂಕ್‌ಗಳಿಂದ ಪಡೆದ ಸುಮಾರು 9,000 ಕೋಟಿ ರುಪಾಯಿ ಸಾಲ (ಬಡ್ಡಿ ಸೇರಿ) ಮರುಪಾವತಿ ಮಾಡದೆ ಬ್ರಿಟನ್‌ನಲ್ಲಿ ನೆಲೆಸಿರುವ ಮಲ್ಯ ಅವರನ್ನು ಅಲ್ಲಿನ ಪೊಲೀಸರು ಕಳೆದ ಏಪ್ರಿಲ್ ನಲ್ಲಿ ಬಂಧಿಸಿದ್ದರು. ನಂತರ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದ ಮುಂದಿನ ವಿಚಾರಣೆಯನ್ನು ಬ್ರಿಟನ್‌ನ ನ್ಯಾಯಾಲಯ ಇದೀಗ ಜುಲೈ 6ಕ್ಕೆ ನಿಗದಿಪಡಿಸಿದೆ.
SCROLL FOR NEXT