ವಿದೇಶ

ಪಾಕಿಸ್ತಾನ ಭಯೋತ್ಪಾದನೆ ವಿರುದ್ಧ ಹೋರಾಡುತ್ತಿದೆ ಎಂದು ಸಮರ್ಥಿಸಿಕೊಂಡ ಚೈನಾ

Guruprasad Narayana
ಬೀಜಿಂಗ್: ಪಾಕಿಸ್ತಾನ ತನ್ನ ಭೂಪ್ರದೇಶದಲ್ಲಿ ಭಯೋತ್ಪಾದನೆಗೆ ಅವಕಾಶ ನೀಡದಂತೆ ನೋಡಿಕೊಳ್ಳಬೇಕು ಎಂದು ಭಾರತ ಮತ್ತು ಅಮೇರಿಕ ಹೇಳಿದ ಬೆನ್ನಲ್ಲಿಯೇ, ಚೈನಾ ಪಾಕಿಸ್ತಾನವನ್ನು ಬುಧವಾರ ಗಟ್ಟಿಯಾಗಿ ಸಮರ್ಥಿಸಿಕೊಂಡಿದೆ. 
ಭಯೋತ್ಪಾದನೆಯ ವಿರುದ್ಧ ಪಾಕಿಸ್ತಾನ ಮುಂದೆ ನಿಂತು ಹೋರಾಡುತ್ತಿದೆ ಮತ್ತು ಇದಕ್ಕಾಗಿ ಅಂತರಾಷ್ಟ್ರಿಯ ಸಮುದಾಯ ಇಸ್ಲಾಮಾಬಾದ್ ಗೆ ಅಗತ್ಯವಾದ ಮನ್ನಣೆ ನೀಡಬೇಕು ಎಂದು ಚೈನಾ ಹೇಳಿದೆ. 
"ನಾವು ಎಲ್ಲ ರೀತಿಯ ಭಯೋತ್ಪಾದನೆಯನ್ನು ವಿರೋಧಿಸುತ್ತೇವೆ. ಮತ್ತು ನಾವು ಈಗಾಗಲೇ ಸ್ಪಷ್ಟಪಡಿಸಿರುವಂತೆ ಭಯೋತ್ಪಾದನೆಯನ್ನು ಕೆಲವು ದೇಶಗಳಿಗಷ್ಟೇ ತಳಕುಹಾಕುವುದನ್ನು ನಾವು ವಿರೋಧಿಸುತ್ತೇವೆ" ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ಲು ಕಾಂಗ್ ಹೇಳಿದ್ದಾರೆ. 
"ಭಯೋತ್ಪಾದನೆಯ ವಿರುದ್ಧ ಪಾಕಿಸ್ತಾನ ಮುಂದೆ ನಿಂತು ಹೋರಾಡುತ್ತಿದೆ ಮತ್ತು ಈ ನಿಟ್ಟಿನಲ್ಲಿ ತನ್ನ ಶ್ರಮವಹಿಸಿದೆ" ಎಂದು ಲು ಹೇಳಿದ್ದಾರೆ. 
ಅಮೇರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಭಾರತ ಪ್ರಧಾನಿ ನರೇಂದ್ರ ಮೋದಿ ಅವರ ಭೇಟಿಯ ನಂತರ ಎರಡೂ ದೇಶಗಳು ನೀಡಿದ್ದ ಜಂಟಿ ಹೇಳಿಕೆಯಲ್ಲಿ ಪಾಕಿಸ್ತಾನ ತನ್ನ ಭೂಪ್ರದೇಶದಲ್ಲಿ ಭಯೋತ್ಪಾದನೆಗೆ ಅವಕಾಶ ನೀಡದಂತೆ ನೋಡಿಕೊಳ್ಳಬೇಕು ಎಂದು ಆಗ್ರಹಿಸಲಾಗಿತ್ತು. 
ಮುಂಬೈ, ಪಠಾಣ್ಕೋಟ್ ಮತ್ತು ಭಾರತೀಯ ನೆಲದಲ್ಲಿ ನಡೆದಿರುವ ಇತರ ಭಯೋತ್ಪಾದಕ ಚಟುವಟಿಕೆಗಳಲ್ಲಿ ನ್ಯಾಯ ಒದಗಿಸಲು ಇಸ್ಲಮಾಬಾದ್ ವೇಗವಾಗಿ ಕೆಲಸ ಮಾಡಬೇಕು ಎಂದು ಕೂಡ ಹೇಳಿಕೆಯಲ್ಲಿ ತಿಳಿಸಲಾಗಿತ್ತು. 
SCROLL FOR NEXT