ವಿದೇಶ

ಸಿರಿಯಾದಲ್ಲೂ ಇಸಿಸ್ ಗೆ ಭಾರಿ ಹಿನ್ನಡೆ, ಐತಿಹಾಸಿಕ ಪಲ್ಮೈರಾ ನಗರ ವಶಪಡಿಸಿಕೊಂಡ ಸೇನೆ

Srinivasamurthy VN

ಬೈರುತ್: ಅಮೆರಿಕ ನೇತೃತ್ವದ ಮೈತ್ರಿಪಡೆಗಳ ನೆರವಿನೊಂದಿಗೆ ಅತ್ತ ಇರಾಕ್ ಸೇನೆ ಇಸಿಸ್ ಉಗ್ರಗಾಮಿ ಸಂಘಟನೆಯ ಹುಟ್ಟಡಗಿಸುತ್ತಿದ್ದಂತೆಯೇ ಇತ್ತ ಸಿರಿಯಾದಲ್ಲೂ ಅದೇ ಬೆಳವಣಿಗೆ ಕಂಡುಬಂದಿದೆ.

ಕೆಲವೇ ತಿಂಗಳಗಳ ಹಿಂದಷ್ಟೇ ಇಸ್ಲಾಮಿಕ್ ಸ್ಟೇಟ್ ಉಗ್ರರು ವಶಪಡಿಸಿಕೊಂಡಿದ್ದ ಸಿರಿಯಾದ ಐತಿಹಾಸಿಕ ನಗರ ಪಲ್ಮೈರಾವನ್ನು ಸಿರಿಯಾ ಸೇನೆ ಮರಳಿ ವಶಕ್ಕೆ ಪಡೆದಿದೆ. ಪ್ರಮುಖವಾಗಿ ಸಿರಿಯಾಗೆ ರಷ್ಯಾ ವಾಯುಸೇನೆ ನೀಡಿದ್ದ  ಬೆಂಬಲದಿಂದಾಗಿ ಸಿರಿಯಾ ಸೇನೆ ಪಲ್ಮೈರಾ ನಗರವನ್ನು ಮರಳಿ ತನ್ನ ವಶಕ್ಕೆ ಪಡೆದಿದೆ.ಕಳೆದೊಂದು ವಾರದಿಂದ ರಷ್ಯಾ ವಾಯುಸೇನೆಯೊಂದಿಗೆ ಸೇರಿ ಸಿರಿಯಾ ಸೈನಿಕರು ಪಲ್ಮೈರಾ ಸಮೀಪದ ಮರುಭೂಮಿಯಲ್ಲಿ ಭೀಕರ  ಕಾಳಗ ನಡೆಸಿದ್ದರು. ಈ ವೇಳೆ ರಷ್ಯಾದ ವೈಮಾನಿಕ ದಾಳಿಯಲ್ಲಿ ಹಲವಾರು ಇಸಿಸ್ ಉಗ್ರರು ಸಾವನ್ನಪ್ಪಿದ್ದರು.

ಇದರ ಬೆನ್ನಲ್ಲೇ ಅತ್ತ ಇರಾಕ್ ನಲ್ಲಿ ಉಗ್ರ ಸಂಘಟನೆಗೆ ಸೋಲಾಗಿರುವುದು ಉಗ್ರರ ಧೈರ್ಯ ಉಡುಗಿಹೋಗುವಂತೆ ಮಾಡಿದ್ದು, ಪ್ರಮುಖವಾಗಿ ಪಲ್ಮೈರಾ ಕೈತಪ್ಪಲು ರಷ್ಯಾ ವಾಯುಸೇನೆಯ ದಾಳಿಯೇ ಕಾರಣ ಎಂದು  ಹೇಳಲಾಗುತ್ತಿದೆ. ಇನ್ನು ಪಲ್ಮೈರಾ ನಗರವನ್ನು ಮರಳಿ ವಶಕ್ಕೆ ಪಡೆದ ಸುದ್ದಿಯನ್ನು ರಷ್ಯಾದ ರಕ್ಷಣಾ ಸಚಿವ ಸೆರ್ಗೈಶೌಯ್ಗು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರಿಗೆ ತಿಳಿಸಿದ್ದಾರೆ.

ಇನ್ನು ಪಲ್ಮೈರಾನಗರದಲ್ಲಿ ವೈದ್ಯಕೀಯ ವ್ಯವಸ್ಥೆ ಒದಗಿಸುತ್ತಿರುವ ಸ್ವಯಂ ಸೇವಾ ಕಾರ್ಯಕರ್ತರು ನೀಡಿರುವ ಮಾಹಿತಿಯಂತೆ ಪಲ್ಮೈರಾ ನಗರದಲ್ಲಿದ್ದ ಬಹುತೇಕ ಉಗ್ರರು ನಗರದಿಂದ ಕಾಲ್ಕಿತ್ತಿದ್ದಾರೆಯಾದರೂ, ನಗರಕ್ಕೆ  ಸಮೀಪದಲ್ಲೇ ಇರುವ ಮರುಭೂಮಿಯಲ್ಲಿ ಅಡಗಿಕುಳಿತಿದ್ದಾರೆ ಎಂದು ತಿಳಿದುಬಂದಿದೆ. ಹೀಗಾಗಿ ಮರುಭೂಮಿಯಲ್ಲೂ ಕಾರ್ಯಾಚರಣೆ ನಡೆಸಲು ಸಿರಿಯಾ ಸೇನೆ ನಿರ್ಧರಿಸಿದೆ ಎಂದು ಹೇಳಲಾಗುತ್ತಿದೆ. ಈ ಹಿಂದೆ ಪಲ್ಮೈರಾ  ಮಾದರಿಯಲ್ಲೇ ಅಮೆರಿಕ ನೇತೃತ್ವ ಮಿತ್ರ ಪಡೆಗಳು ಇಸಿಸ್ ಉಗ್ರ ವಶದಲ್ಲಿದ್ದ ಮೊಸುಲ್ ಮತ್ತು ರಾಕಾ ನಗರಗಳನ್ಮು ವಶಕ್ಕೆ ಪಡೆದಿದ್ದವು.

2015ರ ಮೇ ತಿಂಗಳಲ್ಲಿ ಮೊದಲ ಬಾರಿಗೆ ಐತಿಹಾಸಿಕ ಪಲ್ಮೈರಾ ನಗರವನ್ನು ವಶಕ್ಕೆ ಪಡೆದಿದ್ದ ಜಿಹಾದಿಗಳು ಅಲ್ಲಿನ ಐತಿಹಾಸಿಕ ದೇವಾಲಯಗಳನ್ನು ಲೂಟಿ ಮಾಡಿದ್ದರು. ಅಲ್ಲದೆ ಯುನೆಸ್ಕೋ ವಿಶ್ವ ಪರಂಪರೆ ಪಟ್ಟಿಗೆ ಸೇರಿಸಿದ್ದ  ಐತಿಹಾಸಿಕ ದೇವಾಲಯಕ್ಕೂ ಹಾನಿ ಮಾಡಿದ್ದರು.

SCROLL FOR NEXT