ಬೀಜಿಂಗ್: ನೆರೆ ರಾಷ್ಟ್ರ ಚೀನಾ ರಕ್ಷಣಾ ಬಜೆಟ್ ನ್ನು ಶೇ.7 ರಷ್ಟು ಅಂದರೆ 152 ಬಿಲಿಯನ್ ಡಾಲರ್ ಗೆ ಏರಿಕೆ ಮಾಡಿದ್ದು, ಇದು ಭಾರತದ ರಕ್ಷಣಾ ಬಜೆಟ್ ಗಿಂತ ಮೂರು ಪಟ್ಟು ಹೆಚ್ಚಾಗಿದೆ.
ದಕ್ಷಿಣ ಚೀನಾ ಸಮುದ್ರದ ವಿಷಯವಾಗಿ ಅಮೆರಿಕ ಮಧ್ಯಪ್ರವೇಶ ಮಾಡುತ್ತಿರುವುದರ ಬೆನ್ನಲ್ಲೇ ಚೀನಾ ಅಮೆರಿಕಾಗೆ ತಕ್ಕ ಉತ್ತರ ನೀಡಲು ಸಜ್ಜುಗೊಂಡಂತಿದ್ದು, ರಕ್ಷಣಾ ಬಜೆಟ್ ನ್ನು ಶೇ.7 ರಷ್ಟು ಏರಿಕೆ ಮಾಡಿದ್ದು ಪ್ರಸಕ್ತ ವರ್ಷದಲ್ಲಿ ಮಿಲಿಟರಿ ಬಜೆಟ್ 1.04 ಟ್ರಿಲಿಯನ್ ಯುವಾನ್ ನಷ್ಟಿರಲಿದೆ.
ಕಳೆದ ವರ್ಷದ ಬಜೆಟ್ ಗಿಂತ ಈ ಬಾರಿ ಶೇ.7 ರಷ್ಟು ಖರ್ಚು ಮಾಡಲಿರುವ ಚೀನಾ, 2015, 2016 ಕ್ಕೆ ಹೋಲಿಸಿದರೆ ಇದೇ ಮೊದಲ ಬಾರಿಗೆ ಒಂದು ಟ್ರಿಲಿಯನ್ ಯುವಾನ್ ನಷ್ಟು ಮೊತ್ತವನ್ನು ರಕ್ಷಣಾ ಬಜೆಟ್ ಗೆ ವ್ಯಯಿಸುತ್ತಿದೆ.
ಚೀನಾದ ರಕ್ಷಣಾ ಬಜೆಟ್ ನ್ನು ಭಾರತದ ರಕ್ಷಣಾ ಬಜೆಟ್ (53.5 ಬಿಲಿಯನ್ ಡಾಲರ್) ಗೆ ಹೋಲಿಸಿದರೆ ಭಾರತಕ್ಕಿಂತ 3 ಪಟ್ಟು ಹೆಚ್ಚಿದೆ.
ದೇಶದ ಜಿಡಿಪಿಯ ಶೇ.1.3 ರಷ್ಟನ್ನು ರಕ್ಷಣಾ ಬಜೆಟ್ ಗೆ ವ್ಯಯಿಸಲಾಗುತ್ತಿದ್ದು, ಚೀನಾ ಎಂದಿಗೂ ಅನ್ಯ ರಾಷ್ಟ್ರಗಳ ಮೇಲೆ ಆಕ್ರಮಣ ಮಾಡಿ ಹಾನಿ ಉಂಟು ಮಾಡಿಲ್ಲ ಎಂದು ಚೀನಾ ಹೇಳಿದೆ.