ನವದೆಹಲಿ: ಭಾರತದ ನಿವೃತ್ತ ಸೇನಾಧಿಕಾರಿ ಕುಲಭೂಷಣ್ ಜಾಧವ್ ಗೆ ಪಾಕಿಸ್ತಾನ ವಿಧಿಸಿದ್ದ ಗಲ್ಲು ಶಿಕ್ಷೆಗೆ ಅಂತರಾಷ್ಟ್ರೀಯ ನ್ಯಾಯಾಲಯ ತಡೆಯಾಜ್ಞೆ ನೀಡಿರುವುದರ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪಾಕಿಸ್ತಾನ, ಕೋರ್ಟ್ ತೀರ್ಪನ್ನೇ ಕಟುವಾಗಿ ಟೀಕಿಸಿದೆ.
ಜಾಧವ್ ಪ್ರಕರಣದಲ್ಲಿ ಅಂತಾರಾಷ್ಟ್ರೀಯ ನ್ಯಾಯಾಲಯ ಮಿತಿ ಮೀರಿ ವರ್ತಿಸಿದೆ ಎಂದು ಪಾಕಿಸ್ತಾನ ಅಂತಾರಾಷ್ಟ್ರೀಯ ನ್ಯಾಯಾಲಯವನ್ನು ಟೀಕಿಸಿದ್ದು, ವಿಷಯಾಂತರದ ತಂತ್ರ ಎಂದು ಹೇಳಿದೆ. ಪಾಕಿಸ್ತಾನ ರಕ್ಷಣಾ ಸಚಿವ ಅಂತಾರಾಷ್ಟ್ರೀಯ ನ್ಯಾಯಾಲಯದ ತೀರ್ಪಿನ ಬಗ್ಗೆ ಟ್ವಿಟರ್ ನಲ್ಲಿ ಪ್ರತಿಕ್ರಿಯೆ ನೀಡಿದ್ದು "ಕಳೆದ ತಿಂಗಳು ಪಾಕಿಸ್ತಾನ ಕುಲ್ ಭೂಷಣ್ ಜಾಧವ್ ಗೆ ನೀಡಲಾಗಿದ್ದ ಗಲ್ಲು ಶಿಕ್ಷೆಗೆ ತಡೆ ನೀಡಿದೆ. ಪಾಕಿಸ್ತಾನ ನೆಲದಲ್ಲಿ ಭಾರತ ತಾನೆ ರೂಪಿಸಿದ್ದ ಭಯೋತ್ಪಾದನೆಯಿಂದ ವಿಷಯಾಂತರ ಮಾಡಲು ಐಸಿಜೆ ಮೊರೆ ಹೋಗಿತ್ತು. ಭಾರತ ಪಾಕಿಸ್ತಾನದ ವಿರುದ್ಧ ನ್ಯಾಯಾಲಯದಲ್ಲಿ ದೂರು ದಾಖಲಿಸಿ ಪಾಕ್ ಜಿನಿವಾ ಒಪ್ಪಂದವನ್ನು ಉಲ್ಲಂಘಿಸಿದೆ ಎಂದು ಆರೋಪಿಸಿದ ನಂತರ ಅಂತಾರಾಷ್ಟ್ರೀಯ ನ್ಯಾಯಾಲಯ ಈ ತೀರ್ಪು ನೀಡಿದೆ ಎಂದಿದ್ದಾರೆ.
ಜಾಧವ್ ವಿರುದ್ಧದ ಬೇಹುಗಾರಿಕೆ ಆರೋಪವನ್ನು ಅಲ್ಲಗಳೆದಿದ್ದ ಭಾರತ ಈ ಸಂಬಂಧ ಪಾಕಿಸ್ತಾನಕ್ಕೆ ಪತ್ರಮುಖೇನ ಆಕ್ಷೇಪ ವ್ಯಕ್ತಪಡಿಸಿತ್ತು. ಕುಲಭೂಷಣ್ ಅವರನ್ನು ಬೇಹುಗಾರಿಕೆ ಆರೋಪದ ಮೇಲೆ ಕಳೆದ ವರ್ಷ ಮಾರ್ಚ್ 6ರಂದು ಇರಾನ್ನಲ್ಲಿ ಬಂಧಿಸಲಾಗಿತ್ತು. ಬಳಿಕ ವಿಚಾರಣೆ ನಡೆಸಿದ ಮಿಲಿಟರಿ ನ್ಯಾಯಾಲಯ ಮರಣದಂಡನೆ ವಿಧಿಸಿತ್ತು. ಜಾಧವ್ರ ತಾಯಿ ಅವಂತಿ ಜಾಧವ್ ಮರಣದಂಡನೆ ತಡೆ ಕೋರಿ ಕಳೆದ ತಿಂಗಳು ಪಾಕ್ನ ಉನ್ನತ ಕೋರ್ಟ್ಗೆ ಮನವಿ ಸಲ್ಲಿಸಿದ್ದರು. ಆದರೆ ಪಾಕಿಸ್ತಾನ ಇದಕ್ಕೆ ಸಕಾರಾತ್ಮಕವಾಗಿ ಪ್ರತಿಕ್ರಿಯೆ ನೀಡದ ಹಿನ್ನೆಲೆಯಲ್ಲಿ ಭಾರತ ಐಸಿಜೆ ಮೊರೆ ಹೋಗಿತ್ತು.