ಬ್ರಿಟನ್ ನ ರಾಷ್ಟ್ರೀಯ ಆರೋಗ್ಯ ಸೇವೆಗಳ ವ್ಯವಸ್ಥೆ ಮೇಲೆ ಸೈಬರ್ ದಾಳಿ
ಲಂಡನ್: ಬ್ರಿಟನ್ ನ ರಾಷ್ಟ್ರೀಯ ಆರೋಗ್ಯ ಸೇವೆ(ಎನ್ ಹೆಚ್ಎಸ್) ಮೇಲೆ ಸೈಬರ್ ದಾಳಿ ನಡೆದಿದ್ದು, ಬ್ರಿಟನ್ ನ ಆರೋಗ್ಯ ಸೇವೆಗಳು ಅಸ್ತವ್ಯಸ್ತಗೊಂಡಿವೆ.
ಸೈಬರ್ ದಾಳಿ ಬಗ್ಗೆ ಬ್ರಿಟನ್ ಪ್ರಧಾನಿ ಥೆರೇಸಾ ಮೇ ಪ್ರತಿಕ್ರಿಯೆ ನೀಡಿದ್ದು, ಬ್ರಿಟನ್ ನ ಎನ್ ಹೆಚ್ಎಸ್ ಮೇಲೆ ದೊಡ್ಡ ಪ್ರಮಾಣದಲ್ಲಿ ಸೈಬರ್ ದಾಳಿ ನಡೆಸಲಾಗಿದೆ. ಆದರೆ ಇದೊಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ನಡೆದಿರುವ ಸೈಬರ್ ದಾಳಿಯಾಗಿದೆ ಎಂದು ಹೇಳಿದ್ದಾರೆ. ಸಂಶೋಧಕರೂ ಸಹ ಇದೇ ರೀತಿಯ ಅಭಿಪ್ರಾಯ ವ್ಯಕ್ತಪಡಿಸಿದ್ದು,
ಸೈಬರ್ ದಾಳಿಯಿಂದಾಗಿ ಹಲವು ಆಸ್ಪತ್ರೆಗಳಲ್ಲಿ ರೋಗಿಗಳ ಕುರಿತ ಮಾಹಿತಿಯ ವ್ಯವಸ್ಥೆ ಅಸ್ತವ್ಯಸ್ತಗೊಂಡಿರುವುದರಿಂದ ಹಲವು ಶಸ್ತ್ರಚಿಕಿತ್ಸೆಗಳನ್ನು ರದ್ದುಗೊಳಿಸಲಾಗಿದ್ದು, ಸಾವಿರಾರು ಮಂದಿ ವೈದ್ಯಕೀಯ ಸಿಬ್ಬಂದಿಗಳು ರೋಗಿಗಳಿಗೆ ಸಂಬಂಧಿಸಿದ ಮಹತ್ವದ ಮಾಹಿತಿಗಳನ್ನು ಪಡೆಯಲು ಸಾಧ್ಯವಾಗದೇ ಸಮಸ್ಯೆ ಎದುರಿಸುತ್ತಿದ್ದಾರೆ. ರೋಗಿಗಳ ಕುರಿತ ಮಾಹಿತಿಯನ್ನು ಪಡೆಯಲು ಸಾಧ್ಯವಾಗದೇ ಇರುವ ಹಿನ್ನೆಲೆಯಲ್ಲಿ ಹಲವು ರೋಗಿಗಳನ್ನು ಬೇರೆ ಆಸ್ಪತ್ರೆಗೆ ಸ್ಥಳಾಂತರಿಸಲಾಗುತ್ತಿದೆ. ಇಂಗ್ಲೆಂಡ್ ಹಾಗೂ ಸ್ಕಾಟ್ ಲ್ಯಾಂಡ್ ಸೈಬರ್ ದಾಳಿಯಿಂದ ಅತ್ಯಂತ ಹೆಚ್ಚು ಸಮಸ್ಯೆಗೆ ಸಿಲುಕಿದ್ದು, ಎನ್ ಹೆಚ್ಎಸ್ ಇತಿಹಾಸದಲ್ಲೇ ದೊಡ್ದ ಸೈಬರ್ ದಾಳಿ ಇದಾಗಿದೆ ಎಂದು ಹೇಳಲಾಗುತ್ತಿದೆ.
ಹ್ಯಾಕರ್ ಗಳು ಅಮೆರಿಕಾದ ರಾಷ್ಟ್ರೀಯ ಭದ್ರತಾ ಸಂಸ್ಥೆ ಅಭಿವೃದ್ಧಿಪಡಿಸಿದ್ದ ಕೋಡ್ ನ್ನು ಬಳಸಿಕೊಂಡು ದುರುದ್ದೇಶದಿಂದ ಕಂಪ್ಯೂಟರ್ ವ್ಯವಸ್ಥೆಯನ್ನು ಹಾಳುಮಾಡುವಂತಹ ಇ-ಮೇಲ್ ಅಟ್ಯಾಚ್ ಮೆಂಟ್ ಗಳನ್ನು ಸ್ಪ್ಯಾಮ್ ಮೇಲ್ ಗೆ ಕಳಿಸಿದ್ದಾರೆ. ಇದರಿಂದ ಹ್ಯಾಕ್ ಮಾಡುವುದಕ್ಕೆ ಸಾಧ್ಯವಾಗಿದ್ದು ಅವಾಸ್ಟ್ ಸಾಫ್ಟ್ ವೇರ್ ಸೆಕ್ಯುರಿಟಿ ಸಂಸ್ಥೆಯ ಸಂಶೋಧಕರ ಪ್ರಕಾರ ಸುಮಾರು 100 ರಾಷ್ಟ್ರಗಳಲ್ಲಿ ಸೈಬರ್ ದಾಳಿ ನಡೆದಿದೆ ಎಂದು ಹೇಳಿದ್ದಾರೆ.