ಇಸ್ಲಾಮಾಬಾದ್: ಪಾಕಿಸ್ತಾನದಲ್ಲಿ ಗಲ್ಲು ಶಿಕ್ಷೆಗೆ ಗುರಿಯಾಗಿರುವ ಭಾರತೀಯ ನೌಕಾಪಡೆಯ ನಿವೃತ್ತ ಅಧಿಕಾರಿ ಕುಲಭೂಷಣ್ ಜಾಧವ್ ಅವರಿಗೆ ರಾಜತಾಂತ್ರಿಕ ನೆರವು ನೀಡುವಂತೆ ಅಂತರಾಷ್ಟ್ರೀಯ ಕೋರ್ಟ್(ಐಸಿಜೆ) ಆದೇಶಿಸಿಲ್ಲ ಎಂದು ಪಾಕಿಸ್ತಾನ ಪ್ರಧಾನಿ ನವಾಜ್ ಷರೀಫ್ ಅವರ ವಿದೇಶಾಂಗ ಸಲಹೆಗಾರ ಸರ್ತಾಜ್ ಅಜೀಜ್ ಅವರು ಶನಿವಾರ ಹೇಳಿದ್ದಾರೆ.
ಇಂದು ಇಸ್ಲಾಮಾಬಾದ್ ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅಜೀಜ್, ಅಂತರಾಷ್ಟ್ರೀಯ ಕೋರ್ಟ್ ನಲ್ಲಿ ಪಾಕಿಸ್ತಾನ ಮುಖಭಂಗ ಅನುಭವಿಸಿದೆ ಎಂದು ಹೇಳುವುದು ತಪ್ಪು. ಐಸಿಜೆ ಕೇವಲ ಗಲ್ಲು ಶಿಕ್ಷೆಗೆ ತಡೆ ನೀಡಿದೆ ಅಷ್ಟೆ. ಆದರೆ ಜಾಧವ್ ರಾಜತಾಂತ್ರಿಕೆ ನೆರವಿಗೆ ಸಂಬಂಧಿಸಿದಂತೆ ಯಾವುದೇ ಆದೇಶ ನೀಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಅಂತರಾಷ್ಟ್ರೀಯ ಕೋರ್ಟ್ ನಲ್ಲಿ ಪಾಕಿಸ್ತಾನ ಪರವಾಗಿ ವಾದಿಸಲು ಖವಾರ್ ಖುರೇಷಿ ಅವರನ್ನು ಒಮ್ಮತದಿಂದ ನೇಮಕ ಮಾಡಲಾಗಿದೆ. ಅವರ ವಾದದ ಬಗ್ಗೆ ಎಲ್ಲರಿಗೂ ತೃಪ್ತಿ ಇದೆ. ಕೆಲವರು ಹೇಳುತ್ತಾರೆ ವಾದ ಮಂಡಿಸಲು 90 ನಿಮಿಷಗಳ ಕಾಲವಕಾಶವಿದ್ದರೂ ಕೇವಲ 50 ನಿಮಿಷ ಬಳಕೆ ಮಾಡಿಕೊಳ್ಳಲಾಗಿದೆ ಎಂದು. ಆದರೆ 10 ನಿಮಿಷದಲ್ಲೂ ಸಮರ್ಥವಾಗಿ ವಾದ ಮಂಡಿಸಬಹುದು ಎಂದು ಅಜೀಜ್ ತಮ್ಮ ವಕೀರಲನ್ನು ಸಮರ್ಥಿಸಿಕೊಂಡಿದ್ದಾರೆ. ಅಲ್ಲದೆ ಮುಂದಿನ ವಿಚಾರಣೆಗೆ ಪ್ರಬಲ ವಕೀಲರೊಂದಿಗೆ ಹಾಜರಾಗುವುದಾಗಿ ತಿಳಿಸಿದ್ದಾರೆ.
ಇದೇ ವೇಳೆ ಕುಲಭೂಷಣ್ ಜಾಧವ್ ಗಲ್ಲು ಶಿಕ್ಷೆ ಪ್ರಶ್ನಿಸಿ ಅವರ ತಾಯಿ ಸಲ್ಲಿಸಿರುವ ಮೇಲ್ಮನವಿಯನ್ನು ಪಾಕಿಸ್ತಾನದ ಅಧಿಕಾರಿಗಳು ಸ್ವೀಕರಿಸಿದ್ದು, ಅದನ್ನು ಪರಿಗಣಿಸಲಾಗುವುದು ಎಂದು ಪ್ರಧಾನಮಂತ್ರಿಗಳ ಸಲಹೆಗಾರ ತಿಳಿಸಿದ್ದಾರೆ.
ಕಳೆದ ಏಪ್ರಿಲ್ 26ರಂದು ಜಾಧವ್ ಅವರ ತಾಯಿ ಪಾಕಿಸ್ತಾನಕ್ಕೆ ಮೇಲ್ಮನವಿ ಸಲ್ಲಿಸಿದ್ದು, ಅದನ್ನು ಭಾರತೀಯ ಹೈಕಮಿಷನರ್ ಪಾಕಿಸ್ತಾನದ ವಿದೇಶಾಂಗ ಕಾರ್ಯದರ್ಶಿಗೆ ಹಸ್ತಾಂತರಿಸಿದ್ದಾರೆ.