ಏಂಜೆಲಾ ಮರ್ಕೆಲ್ - ನರೇಂದ್ರ ಮೋದಿ
ಬರ್ಲಿನ್: 100 ಸ್ಮಾರ್ಟ್ ಸಿಟಿ ಹಾಗೂ 50 ಅಮೃತ್ ನಗರಗಳ ನಿರ್ಮಾಣಕ್ಕೆ ಆರ್ಥಿಕ ಸಹಕಾರ ಸೇರಿದಂತೆ 7,212 ಕೋಟಿ ರುಪಾಯಿ ಮೌಲ್ಯದ 8 ಮಹತ್ವದ ಒಪ್ಪಂದಗಳಿಗೆ ಮಂಗಳವಾರ ಭಾರತ ಮತ್ತು ಜರ್ಮನಿ ಸಹಿ ಹಾಕಿದೆ.
ಎಂಟು ಮಹತ್ವದ ಒಪ್ಪಂದಗಳಿಗೆ ಸಹಿ ಹಾಕಿದ ಬಳಿಕ ಜರ್ಮನಿ ಚಾನ್ಸಲರ್ ಏಂಜೆಲಾ ಮರ್ಕೆಲ್ ಅವರೊಂದಿಗೆ ಜಂಟಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು, 'ನಮ್ಮದು ಒಂದು ಅತ್ಯುತ್ತಮ ಜೋಡಿ' ಎಂದು ಹೇಳಿದ್ದಾರೆ.
ಉಭಯ ದೇಶಗಳ ನಡುವಿನ ಸಂಬಂಧ, ವಿಶೇಷವಾಗಿ ಆರ್ಥಿಕ ಸಂಬಂಧಗಳು ಮತ್ತಷ್ಟು ಗಟ್ಟಿಯಾಗಬೇಕು. ಭಾರತ ಮುಂದಿನ ಪೀಳಿಗೆಯ ಮೂಲಸೌಕರ್ಯಕ್ಕಾಗಿ ಹೆಚ್ಚು ಒತ್ತು ನೀಡುತ್ತಿದ್ದು, ಈ ನಿಟ್ಟಿನಲ್ಲಿ ನಾವು ಜರ್ಮಿಯೊಂದಿಗೆ ಹೆಚ್ಚು ಕೆಲಸ ಮಾಡಬೇಕಾಗಿದೆ ಎಂದು ಪ್ರಧಾನಿ ಹೇಳಿದರು.
ಈ ವೇಳೆ ಮಾತನಾಡಿದ ಮಾರ್ಕೆಲ್ ಅವರು, ಭಾರತ ಒಂದು ವಿಶ್ವಾಸಾರ್ಹ ಪಾಲುದಾರನೆಂದು ಸಾಬೀತಾಗಿದೆ ಮತ್ತು ಎರಡೂ ದೇಶಗಳು ಸಹಕಾರವನ್ನು ಮತ್ತಷ್ಟು ಗಾಢವಾಗಿಸಲು ಸಮರ್ಥವಾಗಿವೆ ಎಂದರು.
ಪ್ರಧಾನಿ ಮೋದಿ ಅವರ ನಾಲ್ಕು ರಾಷ್ಟ್ರಗಳ ಪ್ರವಾಸ ಸೋಮವಾರದಿಂದ ಆರಂಭವಾಗಿದ್ದು, ಇಂದು ಸ್ಕಾಲಾಸ್ ಮೆಸೆಬರ್ಗ್ ಅರಮನೆಯಲ್ಲಿ ಏಂಜೆಲಾ ಮಾರ್ಕೆಲ್ ಅವರನ್ನು ಭೇಟಿ ಮಾಡಿ, ಉಭಯ ರಾಷ್ಟ್ರಗಳ ನಡುವಿನ ದ್ವಿಪಕ್ಷೀಯ ಸಂಬಂಧಕ್ಕೆ ಸಂಬಂಧಿಸಿದಂತೆ ವಿಸ್ತೃತ ಮಾತುಕತೆ ನಡೆಸಿದರು.