ಲಂಡನ್: ಇಸ್ರೇಲ್ ಭೇಟಿ ವಿವಾದಕ್ಕೆ ಸಂಬಂಧಸಿದಂತೆ ಭಾರತೀಯ ಮೂಲದ ಬ್ರಿಟನ್ ನ ಹಿರಿಯ ಸಚಿವೆ ಪ್ರೀತಿ ಪಟೇಲ್ ಅವರು ತಮ್ಮ ಸ್ಥಾನಕ್ಕೆ ಗುರುವಾರ ರಾಜಿನಾಮೆ ನೀಡಿದ್ದಾರೆ.
ಪ್ರೀತಿ ಅವರು ಇಸ್ರೇಲ್ ಪ್ರಧಾನಿ ಸೇರಿದಂತೆ ಅಲ್ಲಿನ ಇತರೆ ರಾಜಕಾರಣಿಗಳೊಂದಿಗೆ ಖಾಸಗಿ ಭೇಟಿ ನಡೆಸಿದ್ದು ತೀವ್ರ ವಿವಾದಕ್ಕೆ ಕಾರಣವಾಗಿತ್ತು. ಈ ಹಿನ್ನೆಲೆಯಲ್ಲಿ ಉಗಾಂಡ ಹಾಗೂ ಇಥಿಯೋಪಿಯಾ ಪ್ರವಾಸದಲ್ಲಿದ್ದ ಪ್ರೀತಿಯನ್ನು ಇಂಗ್ಲೆಂಡ್ ಪ್ರಧಾನಿ ಥೆರೆಸಾ ಮೇ ಅವರು ವಾಪಸ್ ಕರೆಸಿಕೊಂಡು, ರಾಜಿನಾಮೆ ಪಡೆದಿದ್ದಾರೆ.
ಅಂತರಾಷ್ಟ್ರೀಯ ಅಭಿವೃದ್ಧಿ ಸಚಿವೆಯಾಗಿದ್ದ ಪ್ರೀತಿ ಅವರು, ಕಳೆದ ಆಗಸ್ಟ್‌ನಲ್ಲಿ ಖಾಸಗಿ ಪ್ರವಾಸ ಕೈಗೊಂಡಿದ್ದಾಗ ಇಸ್ರೇಲ್‌ನ ಪ್ರಧಾನಿ ಬೆಂಜಮಿನ್ ನೇತನ್ಯಾಹು ಸೇರಿದಂತೆ ಹಲವರನ್ನು ಭೇಟಿ ಮಾಡಿದ್ದು ವರದಿಯಾಗಿತ್ತು. ಇದಕ್ಕೆ ಪ್ರೀತಿ ಕ್ಷಮೆ ಕೇಳಿದ್ದು, ಅದನ್ನು ಪ್ರಧಾನಿ ಸಮ್ಮತಿಸಿದ್ದರು. ಆದರೆ ಇದೀಗ ಮತ್ತಷ್ಟು ಭೇಟಿಯ ಆರೋಪಗಳು ಕೇಳಿಬಂದ ಹಿನ್ನೆಲೆಯಲ್ಲಿ ಸಚಿವ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ.
ರಾಜಿನಾಮೆ ಪತ್ರದಲ್ಲಿ ಮತ್ತೆ ಪ್ರಧಾನಿ ಥೆರೆಸಾ ಮೇ ಅವರಿಗೆ ಕ್ಷಮೆ ಕೇಳಿರುವ ಪ್ರೀತಿ ಪಟೇಲ್ ಅವರು, ನಾನು ನಂಬಿದ್ದ ಪಾರದರ್ಶಕತೆ ಮತ್ತು ಮುಕ್ತತೆಯ ಗುಣಮಟ್ಟ ಕುಸಿದಿದೆ ಎಂದು ಹೇಳಿದ್ದಾರೆ.