ನವದೆಹಲಿ: ವಿಶ್ವ ಮಟ್ಟದಲ್ಲಿ ಪಾಕಿಸ್ತಾನಕ್ಕೆ ಮತ್ತೆ ಮುಖಭಂಗವಾಗಿದ್ದು, ಭಾರತದ ಗೋಧಿ ಚಾಬಹಾರ್ ಬಂದರು ಮೂಲಕ ಆಫ್ಘಾನಿಸ್ಥಾನ ತಲುಪಿದೆ.
ಇರಾನ್ ನೊಂದಿಗಿನ ಸೌಹಾರ್ಧ ಸಂಬಂಧ ಮತ್ತು ಒಪ್ಪಂದದ ಅನ್ವಯ ಭಾರತ ಮಾಡಿಕೊಂಡಿದ್ದ ಚಾಬಹಾರ್ ಬಂದರು ಒಪ್ಪಂದ ಇದೀಗ ಕಾರ್ಯಾರಂಭ ಮಾಡಿದ್ದು, ಇರಾನ್‌ನ ಚಾಬಹಾರ್ ಬಂದರು ಮುಖೇನ ಭಾರತ ರಫ್ತು ಮಾಡಿದ್ದ ಗೋಧಿ ಇದೀಗ ಆಫ್ಘಾನಿಸ್ತಾನ ತಲುಪಿದೆ. ಕಳೆದ ಅಕ್ಟೋಬರ್ 29ರಂದು ಭಾರತದ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಹಾಗೂ ಅಫ್ಘಾನಿಸ್ತಾನದ ವಿದೇಶಾಂಗ ಸಚಿವ ಸಲಾಹುದ್ದೀನ್ ರಬ್ಬಾನಿ ವಿಡಿಯೋ ಕಾನ್ಫರೆನ್ಸ್ ಮೂಲಕ ಹೊಸ ಮಾರ್ಗದ ಮೂಲಕ ರಫ್ತು ಮಾಡುವ ಕಾರ್ಯಕ್ಕೆ ಚಾಲನೆ ಕೊಟ್ಟಿದ್ದರು.
ಚಾಲನೆ ನೀಡಿದ ನಂತರ ಭಾರತ ಮೊದಲ ಬಾರಿಗೆ ಗೋಧಿಯನ್ನ ಕರಾಚಿ ಮಾರ್ಗದ ಬದಲಾಗಿ ಇರಾನ್ ನ ಚಾಬಹಾರ್ ಬಂದರು ಮೂಲಕ ರಫ್ತು ಮಾಡಿತ್ತು. ಇದೀಗ ಈ ಗೋಧಿ ಆಫ್ಘಾನಿಸ್ತಾನ ತಲುಪಿದ್ದು, ಆಫ್ಘಾನಿಸ್ತಾನದ ಜರಂಜ್ ನಲ್ಲಿ ಭಾರತ ರವಾನಿಸಿದ್ದ ಗೋಧಿ ತುಂಬಿದ್ದ ಸರಕು ಸಾಗಾಣಿಕಾ ನೌಕೆ ಸುರಕ್ಷಿತವಾಗಿ ಬಂದು ತಲುಪಿದೆ. ಈ ಬಗ್ಗೆ ಟ್ವೀಟ್ ಮಾಡಿ ಮಾಹಿತಿ ನೀಡಿರುವ ಮನಪ್ರೀತ್ ವೋಹ್ರಾ ಅವರು, ಮೊದಲ ಗೋದಿ ಶಿಪ್ ಮೆಂಟ್ ಆಫ್ಘಾನಿಸ್ತಾನಜ ಜರಂಜ್ ಗೆ ಆಗಮಿಸಿದ್ದು, ಇದು ತುಂಬಾ ಹೆಮ್ಮೆಯ ವಿಚಾರವಾಗಿದೆ ಎಂದು ಟ್ವೀಟ್ ಮಾಡಿದ್ದಾರೆ.
ಆ ಮೂಲಕ ಪಾಕಿಸ್ತಾನಕ್ಕೆ ಪಾಠ ಕಲಿಸುವ ಭಾರತದ ಮೊದಲ ಮಾಸ್ಟರ್ ಪ್ಲಾನ್ ವರ್ಕೌಟ್ ಆಗಿದೆ. ಇದರಿಂದ ಭವಿಷ್ಯದಲ್ಲಿ ಭಾರತ ಮತ್ತು ಅಫ್ಘಾನಿಸ್ತಾನ ದೇಶಗಳ ಸಂಬಂಧ ಮತ್ತಷ್ಟು ಉತ್ತಮಗೊಳ್ಳಲಿದ್ದು, ಪಾಕಿಸ್ತಾನದ ಆರ್ಥಿಕ ಸಂಪನ್ಮೂಲಕ್ಕೆ ದೊಡ್ಡ ಹೊಡೆತ ಬಿದ್ದಂತಾಗಿದೆ.