ಥಾಣೆ: ಅಜ್ಞಾತವಾಗಿ ವಾಸಿಸುತ್ತಿರುವ ಭೂಗತ ಪಾತಕಿ ದಾವೂದ್ ಇಬ್ರಾಹಿಂ ಖಿನ್ನತೆಗೊಳಗಾಗಿದ್ದಾನೆ.
ಪಾತಕ ಲೋಕದಲ್ಲಿರುವವನಿಗೆ ಎಂತಹ ಖಿನ್ನತೆ, ಖಿನ್ನತೆಗೊಳಗಾಗಲು ಕಾರಣ ಏನು ಎಂದು ಅಚ್ಚರಿಯಾಯಿತಾ? ತನ್ನ ಒಬ್ಬನೇ ಪುತ್ರ ಮೊಯಿನ್ ನವಾಜಾ ಡಿ.ಕಸ್ಕರ್ (31) ಲೌಕಿಕವನ್ನು ತೊರೆದು ಮೌಲಾನ (ಧರ್ಮ ಗುರು) ಆಗುವುದಕ್ಕೆ ನಿರ್ಧರಿಸಿದ್ದಾನೆ. ಈ ಹಿನ್ನೆಲೆಯಲ್ಲಿ ದಾವೂದ್ ಇಬ್ರಾಹಿಂ ಖಿನ್ನತೆಗೊಳಗಾಗಿದ್ದಾನೆ ಎಂದು ಹೇಳಲಾಗುತ್ತಿದೆ.
ಮೊಯಿನ್ ತನ್ನ ತಂದೆಯ ಅಕ್ರಮ ಕೆಲಸಗಳ ಬಗ್ಗೆ ತೀವ್ರ ಅಸಮಾಧಾನಗೊಂಡಿದ್ದು, ತನ್ನ ತಂದೆ ಮಾಡುತ್ತಿರುವ ಕೆಲಸಗಳಿಂದಾಗಿ ತಮ್ಮ ಕುಟುಂಬಕ್ಕೆ ಪಾತಕಿಗಳ ಹಣೆಪಟ್ಟಿ ಸಿಕ್ಕಿದೆ ಎಂಬ ಭಾವನೆ ಹೊಂದಿದ್ದಾನೆ. ದಾವೂದ್ ಮಗ ಹಾಗೂ ಆತನ ಇನ್ನಿತರ ಕೌಟುಂಬಿಕ ಸಮಸ್ಯೆಗಳ ಬಗ್ಗೆ ದಾವೂದ್ ಇಬ್ರಾಹಿಂ ನ ಸಹೋದರ ಇಕ್ಬಾಲ್ ಇಬ್ರಾಹಿಂ ಕಸ್ಕರ್ ಭಾರತದ ಅಧಿಕಾರಿಗಳೆದುರು ಬಹಿರಂಗಪಡಿಸಿದ್ದಾನೆ.
ಮಗನ ವರ್ತನೆಯಿಂದ ನೊಂದು ತನ್ನ ನಂತರ ತನ್ನ ಭೂಗತ ಸಾಮ್ರಾಜ್ಯವನ್ನು ಯಾರು ನೋಡಿಕೊಳ್ಳುತ್ತಾರೆ ಎಂಬ ಖಿನ್ನತೆಗೆ ಒಳಗಾಗಿದ್ದಾನೆ ಎಂದು ಇಕ್ಬಾಲ್ ಇಬ್ರಾಹಿಂ ಕಸ್ಕರ್ ಅಧಿಕಾರಿಗಳಿಗೆ ತಿಳಿಸಿದ್ದಾನೆ. ತನ್ನ ಸಹೋದರರ ಪೈಕಿ ಕೆಲವರು ಮೃತಪಟ್ಟಿದ್ದಾರೆ, ಅನೀಸ್ ಇಬ್ರಾಹಿಂ ಕಸ್ಕರ್ ಗೆ ವಯಸ್ಸಾಗಿದೆ ಹಾಗೂ ಹತ್ತಿರದ ಸಂಬಂಧಿಗಳ ಬಗ್ಗೆ ದಾವೂದ್ ಗೆ ವಿಶ್ವಾಸವಿಲ್ಲ ಎಂದು ತಿಳಿದುಬಂದಿದೆ.