ದುಬೈ: ಅರಬ್ ರಾಷ್ಟ್ರಗಳ ಜೈಲುಗಳಲ್ಲಿರುವ 22 ಭಾರತೀಯ ಕೈದಿಗಳನ್ನು ಬಿಡುಗಡೆ ಮಾಡಿ, ಇತರೆ 97 ಕೈದಿಗಳ ಶಿಕ್ಷೆಯ ಪ್ರಮಾಣವನ್ನು ಕುವೈತ್ ದೊರೆ ಕಡಿತಗೊಳಿಸಿದ್ದಾರೆಂದು ಕುವೈತ್'ನಲ್ಲಿರುವ ಭಾರತದ ರಾಯಭಾರಿ ಸೋಮವಾರ ತಿಳಿಸಿದ್ದಾರೆ.
119 ಕೈದಿಗಳ ಪೈಕಿ ಮರಣದಂಡನೆಗೆ ಗುರಿಯಾಗಿದ್ದ 15 ಮಂದಿ ಭಾರತೀಯ ಕೈದಿಗಳ ಶಿಕ್ಷೆಯನ್ನು ಜೀವಾವಧಿ ಶಿಕ್ಷೆಗೆ ಇಳಿಸಲಾಗಿದೆ. 53 ಕೈದಿಗಳ ಜೀವಾವಧಿ ಶಿಕ್ಷೆಯಿಂದ 20 ವರ್ಷಗಳ ಶಿಕ್ಷೆಯಾಗಿ ಮಾರ್ಪಾಡು ಮಾಡಲಾಗಿದೆ. 18 ಕೈದಿಗಳಿಗೆ ವಿಧಿಸಿದ್ದ ಶಿಕ್ಷೆ ಪ್ರಮಾಣದ ಮುಕ್ಕಾಲು ಭಾಗ, 25 ಕೈದಿಗಳಿಗೆ ಅರ್ಧ ಭಾಗ, ಒಬ್ಬ ಕೈದಿಯ ಕಾಲು ಭಾಗ ಶಿಕ್ಷೆ ಪ್ರಮಾಣವನ್ನು ಕಡಿತಗೊಳಿಸಲಾಗಿದೆ ಎಂದು ರಾಯಭಾರಿ ಹೇಳಿದ್ದಾರೆ.
ಕುವೈತ್'ನಲ್ಲಿ ಮಾದಕ ದ್ರವ್ಯ ಸೇವೆ, ಮಾದಕ ದ್ರವ್ಯ ಮಾರಾಟ, ಕಳ್ಳತನ, ದರೋಡೆ, ಹಾಗೂ ವಂಚನೆ ಸೇರಿದಂತೆ ವಿವಿಧ ಪ್ರಕರಣಗಳಲ್ಲಿ ಭಾಗಿಯಾಗಿರುವ ಆರೋಪದ ಮೇಲೆ ಭಾರತೀಯರು ಜೈಲು ಶಿಕ್ಷೆಯನ್ನು ಅನುಭವಿಸುತ್ತಿದ್ದಾರೆ. ಇದೀಗ ಜೈಲು ಶಿಕ್ಷೆಗೆ ಗುರಿಯಾಗಿದ್ದ 22 ಭಾರತೀಯ ಕೈದಿಗಳನ್ನು ಕೂಡಲೇ ಬಿಡುಗಡೆ ಮಾಡುವಂತೆ ಕುವೈತ್ ದೊರೆ ಆದೇಶ ನೀಡಿದ್ದಾರೆ.
ಬಿಡುಗಡೆಯಾಗಿರುವ ಭಾರತೀಯ ಕೈದಿಗಳು ತವರಿಗೆ ಮರಳಲು ಎಲ್ಲಾ ರೀತಿಯ ವ್ಯವಸ್ಥೆಗಳನ್ನು ಮಾಡಲಾಗುತ್ತದೆ ಎಂದು ಭಾರತೀಯ ರಾಯಭಾರಿ ತಿಳಿಸಿದ್ದಾರೆ.
ಭಾರತೀಯ ಕೈದಿಗಳ ಬಿಡುಗಡೆ ಹಾಗೂ ಶಿಕ್ಷೆ ಪ್ರಮಾಣವನ್ನು ಕಡಿತಗೊಳಿಸಿರುವುದಕ್ಕೆ ಕುವೈತ್ ದೊರೆಗೆ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ಸಾಮಾಜಿಕ ಜಾಲತಾಣ ಟ್ವಿಟರ್'ನಲ್ಲಿ ಟ್ವೀಟ್ ಮಾಡುವ ಮೂಲಕ ಧನ್ಯವಾದಗಳನ್ನು ತಿಳಿಸಿದ್ದಾರೆ.