ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಪಾಕಿಸ್ತಾನ ವಿದೇಶಾಂಗ ಸಚಿವ ಖ್ವಾಜಾ ಮೊಹಮ್ಮದ್ ಆಸೀಫ್
ಇಸ್ಲಾಮಾಬಾದ್: ಭಯೋತ್ಪಾದನೆಗೆ ಪ್ರಚೋದನೆ ನೀಡುತ್ತಿರುವ ಕುರಿತಂತೆ ಜಾಗತಿಕ ಮಟ್ಟದಲ್ಲಿ ತೀವ್ರ ಮುಖಭಂಗ ಎದುರಿಸುತ್ತಿರುವ ಪಾಕಿಸ್ತಾನ ಭಾರತದ ವಿರುದ್ಧ ವಿನಾಕಾರಣ ಒಂದಲ್ಲಾ ಒಂದು ಹೇಳಿಕೆಯನ್ನು ನೀಡುತ್ತಲೇ ಇದೆ.
ಪಾಕಿಸ್ತಾನ ವಿದೇಶಾಂಗ ಸಚಿವ ಖ್ವಾಜಾ ಮೊಹಮ್ಮದ್ ಆಸೀಫ್ ಅವರು ತಮ್ಮ ನಾಲಿಗೆಯನ್ನು ಹರಿಬಿಟ್ಟಿದ್ದು, ಪ್ರಧಾನಮಂತ್ರಿ ನರೇಂದ್ರ ಮೋದಿ ಓರ್ವ ಉಗ್ರ, ಆರ್'ಎಸ್ಎಸ್ ಒಂದು ಉಗ್ರ ಸಂಘಟನೆಯೆಂದು ಕರೆದಿದ್ದಾರೆ.
ಪಾಕ್ ಮಾಧ್ಯಮವೊಂದರ ಕಾರ್ಯಕ್ರಮದಲ್ಲಿ ಮಾತನಾಡಿರುವ ಖ್ವಾಜಾ ಆಸೀಫ್ ಅವರು, ಪಾಕಿಸ್ತಾನ ಭಯೋತ್ಪಾದನೆಯನ್ನು ರಫ್ತು ಮಾಡುತ್ತಿದೆ ಎಂದು ಭಾರತದ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ಆರೋಪಿಸಿದ್ದಾರೆ. ಭಾರತದ ಪ್ರಧಾನಮಂತ್ರಿಯೇ ಓರ್ವ ಉಗ್ರ. ಗುಜರಾತ್ ಹತ್ಯಾಕಾಂಡದಲ್ಲಿ ಸಾವನ್ನಪ್ಪಿದ ಮುಸ್ಲಿಮರ ರಕ್ತದ ಕಲೆ ಪ್ರಧಾನಿ ಮೋದಿಯವರ ಕೈಯಲ್ಲಿದೆ ಎಂದು ಹೇಳಿದ್ದಾರೆ.
ಉಗ್ರ ಸಂಘಟನೆಯಾಗಿರುವ ಆರ್'ಎಸ್ಎಸ್ ಭಾರತದಲ್ಲಿ ಅಧಿಕಾರ ನಡೆಸುತ್ತಿದೆ. ರಾಷ್ಟ್ರೀಯ ಸ್ವಯಂ ಸೇವಕ ಸಂಘಟನೆ ಭಾರತದಲ್ಲಿನ ಭಯೋತ್ಪಾದಕರ ಒಂದು ಭಾಗವಾಗಿದ್ದು, ಆರ್'ಎಸ್ಎಸ್ ಹೇಳಿದಂತೆ ಪ್ರಧಾನಿ ಮೋದಿ ಅಧಿಕಾರ ನಡೆಸುತ್ತಿದ್ದಾರೆಂದು ಆರೋಪಿಸಿದ್ದಾರೆ.
ಕೆಲ ದಿನಗಳ ಹಿಂದಷ್ಟೇ ವಿದೇಶಾಂಗ ಸಚಿವೆ ಸುಷಅಮಾ ಸ್ವರಾಜ್ ಅವರು ವಿಶ್ವಸಂಸ್ಥೆಯಲ್ಲಿ ಪಾಕಿಸ್ತಾನದ ಮಾನವನ್ನು ಹರಾಜು ಹಾಕಿದ್ದರು. ಭಾರತವು ಬಡತನ ವಿರುದ್ಧ ಕ್ರಮ ಕೈಗೊಂಡು, ಮಾಹಿತಿ ತಂತ್ರಜ್ಞಾನ ಮತ್ತು ಇತರ ಕ್ಷೇತ್ರಗಳಲ್ಲಿ ಬೆಳವಣಿಗೆ ಕಂಡು ಎಂಜಿನಿಯರ್ ಗಳು, ವೈದ್ಯರನ್ನು ಉತ್ಪಾದಿಸುತ್ತಿದ್ದರೆ ಪಾಕಿಸ್ತಾನ ರಾಷ್ಟ್ರ ಜಿಹಾದಿಗಳನ್ನು ಹುಟ್ಟುಹಾಕಿ ಬೆಳೆಸುತ್ತಿದೆ ಎಂದು ಗುಡುಗಿದ್ದರು.