ವಿದೇಶ

ರೊಹಿಂಗ್ಯಾ ನಿರಾಶ್ರಿತರ ಹೊತ್ತು ಸಾಗುತ್ತಿದ್ದ ಬೋಟ್ ಮುಳುಗಡೆ, 12 ಸಾವು, ಹಲವರು ನಾಪತ್ತೆ!

Srinivasamurthy VN
ಬರ್ಮಾ: ರೊಹಿಂಗ್ಯಾ ನಿರಾಶ್ರಿತರನ್ನು ಹೊತ್ತು ಸಾಗುತ್ತಿದ್ದ ಬೋಟ್ ಮುಳುಗಡೆಯಾಗಿ ಕನಿಷ್ಢ 12 ಮಂದಿ ಸಾವಿಗೀಡಾಗಿರುವ ಘಟನೆ ಬಾಂಗ್ಲಾದೇಶದ ನಾಫ್ ನದಿಯಲ್ಲಿ ಸಂಭವಿಸಿದೆ.
ಮಯನ್ಮಾರ್ ನ ರಾಖೀನ್ ನಗರದಲ್ಲಿ ನಡೆಯುತ್ತಿರುವ ಸೇನಾ ಕಾರ್ಯಾಚರಣೆಯಿಂದಾಗಿ ಲಕ್ಷಾಂತರ ರೊಹಿಂಗ್ಯಾ ಮುಸ್ಲಿಮರು ಮಯನ್ಮಾರ್ ತೊರೆಯುತ್ತಿದ್ದು, ಇದೇ ಮಾದರಿಯಲ್ಲೇ ಸುಮಾರು 100 ಮಂದಿ ರೊಹಿಂಗ್ಯಾ  ನಿರಾಶ್ರಿತರು ಮಯನ್ಮಾರ್ ತೊರೆದು ಬಾಂಗ್ಲಾದೇಶದತ್ತ ಪ್ರಯಾಣ ಬೆಳೆಸಿದ್ದರು. ಪ್ರಯಾಣಿಕ ಬೋಟ್ ನಲ್ಲಿ ನಿರಾಶ್ರಿತರು ಬಾಂಗ್ಲಾದೇಶದತ್ತ ಸಾಗಿದ್ದು, ಈ ವೇಳೆ ಬೋಟ್ ದುರಂತಕ್ಕೀಡಾಗಿದೆ.

ವಿಚಾರ ತಿಳಿಯುತ್ತಿದ್ದಂತೆಯೇ ಬಾಂಗ್ಲಾದೇಶದ ಅಗ್ನಿಶಾಮಕ ದಳ ಹಾಗೂ ವಿಪತ್ತು ನಿಗ್ರಹ ದಳದ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿದ್ದು, ಕಾರ್ಯಾಚರಣೆ ನಡೆಸಿದ್ದಾರೆ. ಬೋಟ್ ಪ್ರಯಾಣಿಕರೆಲ್ಲರೂ ನೀರಿನಲ್ಲಿ ಮುಳುಗಿದ್ದು, ಈ ವರೆಗೂ  ಸುಮಾರು 12 ಶವಗಳನ್ನು ಹೊರತೆಗೆಯಲಾಗಿದೆ. ಅಂತೆಯೇ ಹತ್ತಾರು ಮಂದಿ ನಾಪತ್ತೆಯಾಗಿದ್ದಾರೆ. ಹೀಗಾಗಿ ಸಾವಿನ ಸಂಖ್ಯೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಪ್ರಸ್ತುತ ದುರಂತ ಸಂಭವಿಸಿರುವ ನಾಫ್ ನದಿ ಬಾಂಗ್ಲಾದೇಶ ಮತ್ತು ಮಯನ್ಮಾರ್ ದೇಶಗಳನ್ನು ಪ್ರತ್ಯೇಕಿಸುತ್ತದೆ. ಉಭಯ ದೇಶಗಳ ನಡುವಿನ ಸಂಪರ್ಕಕ್ಕೆ ಇದು ತೀರ ಹತ್ತಿರದ ಮಾರ್ಗವಾಗಿದೆ ಎಂದು ತಜ್ಞರು  ಅಭಿಪ್ರಾಯಪಟ್ಟಿದ್ದಾರೆ.
SCROLL FOR NEXT