ಇಸ್ಲಾಮಾಬಾದ್: ಉಗ್ರವಾದಿಗಳನ್ನು ರಾಜಕೀಯಕ್ಕೆ ಬಿಟ್ಟುಕೊಳ್ಳುವುದು ಪಾಕಿಸ್ತಾನಕ್ಕೆ ಎಂದಿದ್ದರಕೂ ಆಪಾಯವೇ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಕಾನೂನುಬಾಹಿರ ಇಸ್ಲಾಮಿಕ್ ಧಾರ್ಮಿಕ ಗುಂಪುಗಳ ರಾಜಕೀಯ ಪಕ್ಷಗಳಿಂದ ಪಾಕಿಸ್ತಾನಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ ಎಂದು ಪಂಜಾಬ್ ವಿಶ್ವವಿದ್ಯಾಲಯದ ಹಿರಿಯ ಉಪನ್ಯಾಸಕ ಮಹಮದ್ ದೈಮ್ ಫೈಜಲ್ ಅವರು ಹೇಳಿದ್ದಾರೆ. ಪಾಕಿಸ್ತಾನದ ಸಿಯಾಲ್ ಕೋಟ್ ಕ್ಯಾಂಪಸ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಮಹಮದ್ ದೈಮ್ ಫೈಜಲ್ ಅವರು, ಈಗಾಗಲೇ ಪಾಕಿಸ್ತಾನ ಸಾಕಷ್ಟು ಸಮಸ್ಯೆಗಳಿಂದ ಅವಸ್ಥೆ ಪಡುತ್ತಿದೆ. ಹೀಗಿರುವಾಗ ಕಾನೂನುಬಾಹಿರ ಇಸ್ಲಾಮಿಕ್ ಧಾರ್ಮಿಕ ಗುಂಪುಗಳು ರಾಜಕೀಯ ಪ್ರವೇಶ ಮಾಡಿದ್ದೇ ಆದರೆ ಅವುಗಳಿಂದ ಪಾಕಿಸ್ತಾನಕ್ಕೆ ಅಪಾಯ ಖಂಡಿತಾ ಎಂದು ಹೇಳಿದ್ದಾರೆ.
ತಮ್ಮ "ಮೇನ್ ಸ್ಟ್ರೀಮಿಂಗ್ ಇಸ್ಲಾಮಿಸ್ಟ್ಸ್: ಎ ಡೇಂಜರಸ್ ಚಾಯ್ಸ್ ಫಾರ್ ಪಾಕಿಸ್ತಾನ್ " ("Mainstreaming Islamists: A Dangerous Choice for Pakistan") ಲೇಖನದಲ್ಲಿ ಈ ಬಗ್ಗೆ ಉಲ್ಲೇಖ ಮಾಡಿರುವ ಉಪನ್ಯಾಸಕ ಮಹಮದ್ ದೈಮ್ ಫೈಜಲ್ ಅವರು "ಇಸ್ಲಾಮಿಕ್ ಉಗ್ರವಾದಿಗಳಿಗೆ ಅವಕಾಶ ಮಾಡಿಕೊಟ್ಟ ಬಳಿಕ ಪಾಕಿಸ್ತಾನದಲ್ಲಿ ನಡೆದ ಕಹಿಘಟನೆಗಳು ಇನ್ನೂ ಹಸಿರಾಗಿಯೇ ಇವೆ. ಪೇಶಾವರ ಶಾಲೆ ಮೇಲಿನ ದಾಳಿ, ಲಾಹೋರ್ ಕ್ರಿಕೆಟಿಗರ ಮೇಲಿನ ದಾಳಿ ಪಾಕಿಸ್ತಾನವನ್ನು ವಿಶ್ವ ಸಮುದಾಯದ ಮುಂದು ಮುಜುಗರಕ್ಕೀಡಾಗುವಂತೆ ಮಾಡಿದೆ. ಇನ್ನು ಕೆಲ ಸಂಘಟನೆಗಳಂತೂ ಉಗ್ರತ್ವದ ಮೂಲಕವೇ ಈ ಸಂಘಟನೆಗಳು ರಾಜಕೀಯದಲ್ಲಿ ಗುರುತಿಸಿಕೊಳ್ಳಲು ಹವಣಿಸುತ್ತಿವೆ. ಇದಕ್ಕೆ ಪಾಕಿಸ್ತಾನದಲ್ಲಿ ನಡೆದ ಕೆಲ ಚುನಾವಣೆಗಳು ಉದಾಹರಣೆಯಂತಿದ್ದು, ವೃತ್ತಿಪರ ರಾಜಕಾರಣಿಗಳಿಗಿಂತಲೂ ಉಗ್ರತ್ವದ ಮೂಲಕ ಗುರುತಿಸಿಕೊಂಡ ಕೆಲ ಮುಖಂಡರು ರಾಜಕೀಯದಲ್ಲಿ ಜಯಿಸಿರುವುದು ಪಾಕ್ ಆತಂಕ ಹೆಚ್ಚಾಗುವಂತೆ ಮಾಡಿದೆ.
ರಾಜಕೀಯದಲ್ಲಿ ಉಗ್ರವಾದಿಗಳ ಪ್ರವೇಶ ನಿಜಕ್ಕೂ ಪಾಕಿಸ್ತಾನದ ಹಿತಾಸಕ್ತಿಗೆ ಧಕ್ಕೆ ತರಲಿದ್ದು, ಉಗ್ರರಿಗೆ ರಾಜಕೀಯದಲ್ಲಿ ಪ್ರವೇಶ ಕಲ್ಪಿಸುವ ಮೂಲಕ ಸರ್ಕಾರ ಅದು ಹೇಗೆ ಭಯೋತ್ಪಾದನೆಯನ್ನು ನಿಗ್ರಹಿಸುತ್ತದೆ ಎಂದು ಮಹಮದ್ ದೈಮ್ ಫೈಜಲ್ ಪ್ರಶ್ನಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics