ಬ್ರಿಕ್ಸ್ ಶೃಂಗಸಭೆಯಲ್ಲಿ ಮಾತನಾಡಿದ ಪ್ರಧಾನ ಮಂತ್ರಿ ನರೇಂದ್ರ ಮೋದಿ
ಕ್ಸಿಯಾಮೆನ್(ಚೀನಾ): ಈ ವರ್ಷ ಜುಲೈ ತಿಂಗಳಲ್ಲಿ ಜಾರಿಗೆ ತಂದ ಸರಕು ಮತ್ತು ಸೇವಾ ತೆರಿಗೆ(ಜಿಎಸ್ ಟಿ) ಭಾರತದಲ್ಲಿ ಅತಿ ದೊಡ್ಡ ಆರ್ಥಿಕ ಸುಧಾರಣೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ. ಇಂದು ವಿಶ್ವದಲ್ಲಿ ಮುಕ್ತ ಆರ್ಥಿಕತೆಯಲ್ಲಿ ಭಾರತ ವೇಗವಾಗಿ ಬದಲಾಗುತ್ತಿದೆ ಎಂದು ಹರ್ಷ ವ್ಯಕ್ತಪಡಿಸಿದರು. ಅವರು ಇಂದು ಚೀನಾದ ಕ್ಸಿಯಾಮಿನ್ ನಲ್ಲಿ 9ನೇ ಬ್ರಿಕ್ಸ್ ಶೃಂಗಸಭೆಯನ್ನುದ್ದೇಶಿಸಿ ಮಾತನಾಡಿದರು.
ಭಾರತಕ್ಕೆ ವಿದೇಶಿ ನೇರ ಬಂಡವಾಳ ಒಳಹರಿವು ಕೂಡ ಶೇಕಡಾ 40ರಷ್ಟು ಹೆಚ್ಚಾಗಿ ಸಾರ್ವಕಾಲಿಕ ದಾಖಲೆ ಕಂಡುಬಂದಿದೆ. ವಿಶ್ವ ಬ್ಯಾಂಕ್ ಸೂಚ್ಯಂಕದಲ್ಲಿ ಭಾರತದ ವ್ಯಾಪಾರ, ವಹಿವಾಟಿನಲ್ಲಿ ಕಳೆದ ಎರಡು ವರ್ಷಗಳಲ್ಲಿ ಹೆಚ್ಚಾಗಿದ್ದು, ಜಾಗತಿಕ ಸ್ಪರ್ಧಾತ್ಮಕ ಸೂಚ್ಯಂಕದಲ್ಲಿ 32 ಅಂಕಗಳಷ್ಟು ಏರಿಕೆಯಾಗಿದೆ ಎಂದರು.
ಜುಲೈಯಲ್ಲಿ ಜಾರಿಗೆ ಬಂದ ಸರಕು ಮತ್ತು ಸೇವಾ ತೆರಿಗೆ ಭಾರತದ ಅತಿದೊಡ್ಡ ಆರ್ಥಿಕ ಸುಧಾರಣೆಯಾಗಿದ್ದು 1.3 ಶತಕೋಟಿ ಜನರಿಂದ ಏಕೀಕೃತ ಮಾರುಕಟ್ಟೆ ಸೃಷ್ಟಿಯಾಗಿದೆ ಎಂದು ಹೇಳಿದರು.
ಡಿಜಿಟಲ್ ಇಂಡಿಯಾ, ಸ್ಟಾರ್ಟ್ ಅಪ್ ಇಂಡಿಯಾ ಮತ್ತು ಮೇಕ್ ಇನ್ ಇಂಡಿಯಾದಂತಹ ಕಾರ್ಯಕ್ರಮಗಳು ಭಾರತ ದೇಶದ ಆರ್ಥಿಕತೆಯ ಸ್ವರೂಪವನ್ನು ಬದಲಾಯಿಸುತ್ತಿವೆ. ಇವುಗಳು ಭಾರತವನ್ನು ಜ್ಞಾನ ಆಧಾರಿತ, ಕೌಶಲ್ಯ ಪ್ರೇರಿತ ಮತ್ತು ತಂತ್ರಜ್ಞಾನಭರಿತ ಸಮಾಜವನ್ನಾಗಿ ಬದಲಾಯಿಸಲು ಸಹಾಯ ಮಾಡುತ್ತವೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಬ್ರಿಕ್ಸ್ ವ್ಯಾಪಾರ ಮಂಡಳಿ ನ್ಯೂ ಡೆವೆಲಪ್ ಮೆಂಟ್ ಬ್ಯಾಂಕ್ ನೊಂದಿಗೆ ನಿಲುವಳಿ ಒಪ್ಪಂದಕ್ಕೆ ಸಹಿ ಹಾಕಿರುವುದನ್ನು ಶ್ಲಾಘಿಸಿದ ಪ್ರಧಾನಿ, ಪ್ರತಿ ಬ್ರಿಕ್ಸ್ ರಾಷ್ಟ್ರಗಳ ಮಧ್ಯೆ ಪರಸ್ಪರ ಆರ್ಥಿಕ ಸಹಕಾರಕ್ಕೆ ಈ ಸಹಭಾಗಿತ್ವ ಮುಖ್ಯವಾಗಿರುತ್ತದೆ ಎಂದರು. ಬ್ರಿಕ್ಸ್ ನ ಸದಸ್ಯ ರಾಷ್ಟ್ರಗಳು ಈ ಬಹು ಹಂತದ ಅಭಿವೃದ್ಧಿ ಬ್ಯಾಂಕನ್ನು ಸ್ಥಾಪಿಸಿದೆ.
ಕೌಶಲ್ಯಾಭಿವೃದ್ಧಿ, ಮೂಲಭೂತ ಸೌಕರ್ಯ ಅಭಿವೃದ್ಧಿ, ಸಣ್ಣ ಮತ್ತು ಮಧ್ಯಮ ಉದ್ಯಮಗಳ (ಎಸ್ಎಂಇ) ಅಭಿವೃದ್ಧಿ, ಇ-ವಾಣಿಜ್ಯ ಮತ್ತು ಡಿಜಿಟಲ್ ಅರ್ಥವ್ಯವಸ್ಥೆಯನ್ನು ಉತ್ತೇಜಿಸಲು ಬ್ರಿಕ್ಸ್ ವಾಣಿಜ್ಯ ಮಂಡಳಿಗಳ ಮಧ್ಯೆ ವಿಷಯಗಳ ಆದ್ಯತೆಯಲ್ಲಿ ಸಾಮ್ಯತೆಯಿದೆ ಎಂದು ಮೋದಿ ಹೇಳಿದರು.
ಬ್ರಿಕ್ಸ್ ರೇಟಿಂಗ್ ಏಜೆನ್ಸಿ, ಇಂಧನ ಸಹಕಾರ, ಹಸಿರು ವಾಣಿಜ್ಯ ಮತ್ತು ಡಿಜಿಟಲ್ ಆರ್ಥಿಕತೆಯಲ್ಲಿ ಬ್ರಿಕ್ಸ್ ಮಂಡಳಿಯ ಕೆಲಸಗಳು ಗಮನಾರ್ಹವಾಗಿವೆ. ಭಾರತ ಸರ್ಕಾರ ಕಡೆಯಿಂದ ಇದಕ್ಕೆ ಸಂಪೂರ್ಣ ಸಹಕಾರ ನೀಡಲಾಗುವುದು. ವ್ಯಾಪಾರ, ವಹಿವಾಟು ಮತ್ತು ಹೂಡಿಕೆ ಕ್ಷೇತ್ರದಲ್ಲಿ ಸಹಕಾರಕ್ಕೆ ಸಾಮಾನ್ಯ ಉದ್ದೇಶಗಳಿವೆ ಎಂದು ಹೇಳಿದರು.
ಬ್ರಿಕ್ಸ್ ಮಂಡಳಿ ಸಭೆಯಲ್ಲಿ ಚೀನಾ ಅಧ್ಯಕ್ಷ ಕ್ಸಿ ಜನ್ ಪಿಂಗ್, ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್, ಬ್ರೆಝಿಲ್ ಅಧ್ಯಕ್ಷ ಮೈಕೆಲ್ ತೆಮೆರ್ ಮತ್ತು ದಕ್ಷಿಣ ಆಫ್ರಿಕಾ ಅಧ್ಯಕ್ಷ ಜಾಕೊಬ್ ಝುಮಾ ಭಾಗವಹಿಸಿದ್ದರು.