ವಿದೇಶ

ರಾಹುಲ್ ಗಾಂಧಿ ಅಮೆರಿಕಾದಲ್ಲಿ ಕೃತಕ ಬುದ್ಧಿಮತ್ತೆ ಬಗ್ಗೆ ಮಾತನಾಡುವುದಿಲ್ಲ: ಸ್ಯಾಮ್ ಪಿಟ್ರೊಡಾ

Sumana Upadhyaya
ವಾಷಿಂಗ್ಟನ್: ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ತಮ್ಮ  ಎರಡು ವಾರಗಳ ಅಮೆರಿಕಾ ಭೇಟಿಯಲ್ಲಿ ಕೃತಕ ಬುದ್ಧಿಮತ್ತೆ(Artificial Intelligence-AI) ಬಗ್ಗೆ ಮಾತನಾಡುತ್ತಾರೆ ಎಂಬ ವರದಿಗಳು ಹುಟ್ಟಿಕೊಂಡಿರುವ ಸಂಬಂಧ ಹೇಳಿಕೆ ನೀಡಿರುವ ಈ ಕಾರ್ಯಕ್ರಮದ ತಾಂತ್ರಿಕ ಸಲಹೆಗಾರ ಸ್ಯಾಮ್ ಪಿಟ್ರೊಡಾ ಇದೊಂದು ಸುಳ್ಳು ವರದಿ ಎಂದಿದ್ದಾರೆ.
ಟ್ವಿಟ್ಟರ್ ನಲ್ಲಿ ಈ ಕುರಿತು ಬರೆದಿರುವ ಸ್ಯಾಮ್ ಪಿಟ್ರೊಡಾ, ರಾಹುಲ್ ಗಾಂಧಿ ಅಮೆರಿಕಾಕ್ಕೆ ಕೃತಕ ಬುದ್ದಿಮತ್ತೆಯ ಬಗ್ಗೆ ಮಾತನಾಡಲು ಬರುತ್ತಿದ್ದಾರೆ ಎಂಬ ವರದಿಗಳು ಮಾಧ್ಯಮಗಳಲ್ಲಿ ಬಂದಿರುವುದನ್ನು ಕೇಳಿದ್ದೇನೆ. ಇದು ಸುಳ್ಳು ಮಾಹಿತಿ ಎಂದು ಹೇಳಿದ್ದಾರೆ. ಹೀಗೆ ಸುಳ್ಳು ಸುದ್ದಿ ಹಬ್ಬಿಸುವವರ ಹಿಂದೆ ಯಾರಿದ್ದಾರೆ ಎಂದು ಗೊತ್ತಾಗುವುದಿಲ್ಲ ಎಂದು ಕೂಡ ಪಿಟ್ರೊಡಾ ಹೇಳಿದ್ದಾರೆ. ಆದರೆ ಈ ಸುದ್ದಿ ಮಾತ್ರ ಇದೀಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
ರಾಹುಲ್ ಗಾಂಧಿಯವರು ಕೃತಕ ಬುದ್ದಿಮತ್ತೆಯ ಬಗ್ಗೆ ಮಾತನಾಡಲು ಅಮೆರಿಕಾಕ್ಕೆ ಬರುತ್ತಿಲ್ಲ ಎಂದು ಪಿಟ್ರೊಡಾ ಒತ್ತಿ ಹೇಳಿದ್ದಾರೆ.
ರಾಹುಲ್ ಗಾಂಧಿಯವರು ಇಲ್ಲಿನ ಶಿಕ್ಷಣ ತಜ್ಞರು, ವಿದ್ಯಾರ್ಥಿಗಳು ಮತ್ತು ಅಮೆರಿಕಾದ ಹಲವು ಚಿಂತಕರನ್ನು ಭೇಟಿ ಮಾಡಲು ಬರುತ್ತಿದ್ದಾರೆ. ಅವರು ಬರ್ಕ್ಲಿಯ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದಲ್ಲಿ ಸಂವಾದ ನಡೆಸಲಿದ್ದಾರೆ. ಅಲ್ಲದೆ ಭಾರತೀಯ ಸಾಗರೋತ್ತರ ಕಾಂಗ್ರೆಸ್ ಕಾರ್ಯಕಾರಿ ಸದಸ್ಯರನ್ನು ಹಾಗೂ ಇತರರನ್ನು ಭೇಟಿ ಮಾಡಲಿದ್ದಾರೆ  ಎಂದು ತಿಳಿಸಿದ್ದಾರೆ.
 ರಾಹುಲ್ ಗಾಂಧಿ ಕಚೇರಿ ಕೂಡ ಈ ಬಗ್ಗೆ ಟ್ವೀಟ್ ಮಾಡಿದ್ದು, ಅಮೆರಿಕಾದಲ್ಲಿನ ವಿದ್ಯಾರ್ಥಿಗಳು, ಕಾಂಗ್ರೆಸ್ ಕಾರ್ಯಕಾರಿ ಸದಸ್ಯರೊಂದಿಗೆ ಮಾತುಕತೆ ನಡೆಸಲು ಎದುರು ನೋಡುತ್ತಿದ್ದೇನೆ ಎಂದು ಹೇಳಿದೆ.
ರಾಹುಲ್ ಗಾಂಧಿ ತಮ್ಮ ಎರಡು ವಾರಗಳ ಅಮೆರಿಕಾ ಪ್ರವಾಸವನ್ನು ನಾಳೆ ಆರಂಭಿಸಲಿದ್ದು, ಅಲ್ಲಿ ಜಾಗತಿಕ ಮಟ್ಟದ ಚಿಂತಕರು, ರಾಜಕೀಯ ನಾಯಕರು, ಸಾಗರೋತ್ತರ ಭಾರತೀಯರನ್ನು ಬೇಟಿ ಮಾಡಿ ಹಲವು ಆರ್ಥಿಕ, ರಾಜಕೀಯ ಮತ್ತು ತಂತ್ರಜ್ಞಾನ ಸಂಬಂಧಿ ವಿಷಯಗಳ ಕುರಿತು ಮಾತುಕತೆ ನಡೆಸಲಿದ್ದಾರೆ.
SCROLL FOR NEXT