ವಿದೇಶ

ಇರ್ಮಾ ಚಂಡಮಾರುತ: ಫ್ಲೋರಿಡಾದಲ್ಲಿ ಪರಸ್ಪರರ ನೆರವಿಗೆ ಧಾವಿಸಿದ ಇಂಡೋ-ಅಮೆರಿಕನ್ನರು!

Srinivasamurthy VN

ಮಿಯಾಮಿ: ಅಮೆರಿಕದ ಫ್ಲೋರಿಡಾಗೆ ಅಪ್ಪಳಿಸಿರುವ ಇರ್ಮಾ ಚಂಡಮಾರುತದಿಂದಾಗಿ ಸಂಕಷ್ಟಕ್ಕೆ ಈಡಾಗಿರುವ ಭಾರತೀಯರು ಮತ್ತು ಅಮೆರಿಕನ್ನರು ಪರಸ್ಪರರ ನೆರವಿಗೆ ಧಾವಿಸುವ ಮೂಲಕ ಐಕ್ಯತೆ ಮೆರೆದಿದ್ದಾರೆ.

ಅಮೆರಿಕದ ಫ್ಲೋರಿಡಾದಲ್ಲಿ ವಿನಾಶಕಾರಿ ಇರ್ಮಾ ಚಂಡಮಾರುತ ಅಪ್ಪಳಿಸಿ ಸುಮಾರು 5.6 ಮಿಲಿಯನ್ ಜನರು ಆಶ್ರಯ ಕಳೆದುಕೊಂಡಿದ್ದಾರೆ. ಮಿಯಾಮಿ ಪ್ರಾಂತ್ಯದಲ್ಲಿ ಚಂಡಮಾರುತದ ಪ್ರಭಾವ ಹೆಚ್ಚಾಗಿದ್ದು, ಈ ಭಾಗದಲ್ಲಿ  ಸುಮಾರು ಒಂದು ಲಕ್ಷಕ್ಕೂ ಅಧಿಕ ಮಂದಿ ನೆಲೆಕಳೆದುಕೊಂಡಿದ್ದಾರೆ. ಫ್ಲೋರಿಡಾದಲ್ಲಿ ಸತಃ ಸ್ಥಳೀಯ ಆಡಳಿತವೇ ಅಸಹಾಯಕ ಪರಿಸ್ಥಿತಿಯಲ್ಲಿದ್ದು, ಸಂತ್ರಸ್ಥರಿಗೆ ಯಾವುದೇ ನೆರವು ನೀಡುವ ಪರಿಸ್ಥಿತಿ ಅಲ್ಲಿಲ್ಲ. ಹೀಗಾಗಿ ಅಲ್ಲಿನ  ಸ್ಥಳೀಯರೇ ಪರಸ್ಪರರ ನೆರವಿಗೆ ಧಾವಿಸಿದ್ದು, ಮನೆಗಳಿಂದ ದೂರವಾಗಿ ಆಶ್ರಯ ಕಳೆದುಕೊಂಡಿರುವ ಅಮೆರಿಕನ್ನರಿಗಾಗಿ ಫ್ಲೋರಿಡಾದಲ್ಲಿರುವ ಭಾರತೀಯರು ಆಶ್ರಯ ಕಲ್ಪಿಸಿದ್ದಾರೆ.

ಅಮೆರಿಕದಲ್ಲಿರುವ ಭಾರತೀಯರು ಕಟ್ಟಿರುವ ಸೇವಾ ಇಂಟರ್ ನ್ಯಾಷನಲ್ ಸಂಸ್ಥೆ ಸೂರು ಕಳೆದುಕೊಂಡಿರುವ ಅಮೆರಿಕನ್ನರಿಗಾಗಿ ತಾತ್ಕಾಲಿಕ ಆಶ್ರಯಧಾಮಗಳನ್ನು ತೆರೆದಿದ್ದು, ಇಲ್ಲಿ ನೂರಾರು ಸಂಖ್ಯೆಯಲ್ಲಿ ನಿರಾಶ್ರಿತ  ಭಾರತೀಯರು ಹಾಗೂ ಅಮೆರಿಕನ್ನರು ಆಶ್ರಯ ಪಡೆದಿದ್ದಾರೆ. ಅಂತೆಯೇ ಅಮೆರಿಕದಲ್ಲಿರುವ ತೆಲುಗು ಅಸೋಸಿಯೇಷವ್ ಸಂಸ್ಥೆ ನಿರಾಶ್ರಿತರಿಗಾಗಿ ಆಹಾರ ಮತ್ತು ವಸ್ತ್ರಗಳ ವ್ಯವಸ್ಥೆ ಕಲ್ಪಿಸಲು ಮುಂದಾಗಿದೆ. ಚಂಡಮಾರುತ ಪೀಡಿತ  ಅಟ್ಲಾಂಟ ಪ್ರದೇಶದಲ್ಲಿನ ಸುಮಾರು 600 ಮಂದಿಗೆ ತೆಲುಗು ಅಸೋಸಿಯೇಷನ್ ಆಹಾರ ವ್ಯವಸ್ಥೆ ಕಲ್ಪಿಸಿದೆ.

ಇದಲ್ಲದೆ ಅಟ್ಲಾಂಟದಲ್ಲಿರುವ ಹಿಂದೂ ದೇವಾಲಯದ ಸಮಿತಿ ಸದಸ್ಯರು ಹಾಗೂ ಭಾರತೀಯ ನಿವಾಸಿಗಳ ಒಕ್ಕೂಟ ಒಟ್ಟು 100 ಮಂದಿ ಅಮೆರಿಕ ನಿರಾಶ್ರಿತರಿಗೆ ಸೂರು ಕಲ್ಪಿಸಿದೆ. ಅಂತೆಯೇ ಒರ್ಲಾಂಡೋದಲ್ಲಿ 400 ಮನೆಗಳಲ್ಲಿ  ನಿರಾಶ್ರಿತರಿಗೆ ಸೂರು ಕಲ್ಪಿಸಲೂ ಕೂಡ ವ್ಯವಸ್ಥೆ ಮಾಡಲಾಗಿದೆ ಎಂದು ಫ್ಲೋರಿಡಾದಲ್ಲಿರುವ ಭಾರತೀಯ ರಾಯಭಾರಿ ಸಂದೀಪ್ ಚಕ್ರವರ್ತಿ ಹೇಳಿದ್ದಾರೆ. ಇನ್ನು ಸೇವಾ ಇಂಟರ್ ನ್ಯಾಷನಲ್ ನಿರ್ಮಿಸಿರುವ ತಾತ್ಕಾಲಿಕ  ಆಶ್ರಯಧಾಮಗಳಿಗೆ ಅಮೆರಿಕದಲ್ಲಿರುವ ಭಾರತದ ರಾಯಭಾರಿ ಸಂದೀಪ್ ಚಕ್ರವರ್ತಿ ಭೇಟಿ ನೀಡಿ ಪರಿಶೀಲಿಸಿದ್ದು, ರಾಯಭಾರ ಕಚೇರಿಯಿಂದಲೂ ನೆರವು ನೀಡುವುದಾಗಿ ಘೋಷಿಸಿದ್ದಾರೆ.

2010 ಜನಗಣತಿಯಂತೆ ಫ್ಲೋರಿಡಾದ ಮಿಯಾಮಿ ಪ್ರಾಂತ್ಯದಲ್ಲಿ ಒಟ್ಟು 1, 20 ಸಾವಿರಕ್ಕೂ ಅಧಿಕ ಭಾರತೀಯರು ನೆಲೆಸಿದ್ದಾರೆ. ಒಟ್ಟಾರೆ ಚಂಡಮಾರುತ ಪೀಡಿತ ಫ್ಲೋರಿಡಾದಲ್ಲಿ ಭಾರತೀಯರು ಐಕ್ಯತೆ ಮತ್ತು ಮಾನವೀಯತೆ  ಮೆರೆಯುವ ಮೂಲಕ ಮಾದರಿಯಾಗಿದ್ದಾರೆ.

SCROLL FOR NEXT