ಭೂಕಂಪದಿಂದ ಕಟ್ಟಡಗಳ ಭಗ್ನಾವಶೇಷದಲ್ಲಿ ಸಿಕ್ಕಿಹಾಕಿಕೊಂಡವರಿಗೆ ಶೋಧ ನಡೆಸುತ್ತಿರುವ ರಕ್ಷಣಾ ತಂಡ
ಮೆಕ್ಸಿಕೊ: ಮೆಕ್ಸಿಕೊ ದೇಶದ ರಾಜಧಾನಿ ಮೆಕ್ಸಿಕೊ ನಗರದ ಕೇಂದ್ರ ಭಾಗದಲ್ಲಿ ನಿನ್ನೆ ಸಂಭವಿಸಿದ ತೀವ್ರ ಭೂಕಂಪದಿಂದ 139 ಮಂದಿ ಮೃತಪಟ್ಟಿದ್ದಾರೆ. ರಿಕ್ಟರ್ ಮಾಪಕದಲ್ಲಿ 7.1 ಪರಿಮಾಣದ ಭೂಕಂಪ ಸಂಭವಿಸಿ ಅನೇಕ ಕಟ್ಟಡಗಳು ಕುಸಿದುಹೋಗಿದ್ದು ಸಾವಿರಾರು ಮಂದಿ ನೋವಿನಿಂದ ನರಳುತ್ತಾ ರಸ್ತೆ ಕಡೆಗೆ ಓಡಾಡುತ್ತಿರುವ ದೃಶ್ಯ ಕಂಡುಬಂತು.
ಮೆಕ್ಸಿಕೊ ನಗರದ ಜನದಟ್ಟಣೆ ಪ್ರದೇಶದಲ್ಲಿ ಭೂಕಂಪ ಸಂಭವಿಸಿ ಹತ್ತಾರು ಕಟ್ಟಡಗಳು ಬಿದ್ದು ಭಗ್ನಾವಶೇಷಗೊಂಡಿವೆ. ಮೆಕ್ಸಿಕೊ ನಗರವೊಂದರಲ್ಲಿಯೇ 44 ಕಡೆಗಳಲ್ಲಿ ಕಟ್ಟಡಗಳು ಬಿದ್ದಿವೆ ಎಂದು ಮೇಯರ್ ಮಿಗುಯೆಲ್ ಏಂಜಲ್ ಮನ್ಸೆರಾ ತಿಳಿಸಿದ್ದಾರೆ.
ಇಂದಿನ ಭೂಕಂಪ 1985ರಲ್ಲಿ ಮೆಕ್ಸಿಕೊ ನಗರದಲ್ಲಿ ಸೆಪ್ಟೆಂಬರ್ 19ರಂದು ರಿಕ್ಟರ್ ಮಾಪಕದಲ್ಲಿ 8.0 ತೀವ್ರತೆಯಲ್ಲಿ ಸಂಭವಿಸಿದ ಭೂಕಂಪದ ಕರಾಳ ದಿನವನ್ನು ನೆನಪಿಸಿದೆ. ಅದೇ ತಾರೀಖಿನಂದು 32 ವರ್ಷಗಳ ನಂತರ ಮೆಕ್ಸಿಕೊ ನಗದಲ್ಲಿ ತೀವ್ರ ಪ್ರಮಾಣದಲ್ಲಿ ಭೂಕಂಪ ಉಂಟಾಗಿರುವುದು ದುರಂತ.
ಮೆಕ್ಸಿಕೊ ದೇಶದ ದಕ್ಷಿಣ ಭಾಗದಲ್ಲಿ ಎರಡು ವಾರಗಳ ಹಿಂದೆ ಭೂಕಂಪ ಸಂಭವಿಸಿ 90 ಜನ ಮೃತಪಟ್ಟಿದ್ದರು.
ಮೆಕ್ಸಿಕೊ ನಗರದ ಕೇಂದ್ರ ಭಾಗದಲ್ಲಿ ಉಂಟಾದ ಪ್ರಬಲ ಭೂಕಂಪದಿಂದ ಮೃತಪಟ್ಟವರ ಸಂಖ್ಯೆ ಇದೀಗ 224ಕ್ಕೇರಿದೆ. ಮೆಕ್ಸಿಕೊ ರಾಜಧಾನಿಯೊಂದರಲ್ಲಿಯೇ 117 ಮಂದಿ ಮೃತಪಟ್ಟಿದ್ದಾರೆ ಎಂದು ಆಂತರಿಕ ಸಚಿವ ಮಿಗುಯೆಲ್ ಒಸೊರಿಯೊ ಚೊಂಗ್ ತಿಳಿಸಿದ್ದಾರೆ.
ಪ್ರಬಲ ಭೂಕಂಪಕ್ಕೆ ಭೂಮಿ ನಡುಗಿ ಅನೇಕ ಕಟ್ಟಡಗಳು ನೆಲಸಮವಾಗಿದ್ದು ಅವಶೇಷಗಳಡಿಯಲ್ಲಿ 21 ಮಂದಿ ಮಕ್ಕಳು ಪ್ರಾಥಮಿಕ ಶಾಲೆಯ ಕಟ್ಟಡದ ಅವಶೇಷಗಳಡಿಯಲ್ಲಿ ಸಿಲುಕಿ ಮೃತಪಟ್ಟಿದ್ದಾರೆ.