ಅಮೆರಿಕದ ವಾಯುಸೇನೆ (ಸಂಗ್ರಹ ಚಿತ್ರ)
ವಾಷಿಂಗ್ಟನ್: ಉತ್ತರ ಕೊರಿಯಾದ ಅಣ್ವಸ್ತ್ರ ಪರೀಕ್ಷೆ ಮತ್ತು ಸರಣಿ ಕ್ಷಿಪಣಿ ಪರೀಕ್ಷೆ ವಿರುದ್ಧ ಕೆಂಡಾಮಂಡಲವಾಗಿರುವ ದೊಡ್ಡಣ್ಣ ಅಮೆರಿಕ ಇದೀಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಉತ್ತರ ಕೊರಿಯಾ ಕರಾವಳಿ ಗಡಿಯಲ್ಲಿ ತನ್ನ ವಾಯುಸೇನೆಯ ಬಾಂಬರ್ ಜೆಟ್ ಗಳ ಹಾರಾಟ ನಡೆಸಿದೆ.
ಮೂಲಗಳ ಪ್ರಕಾರ ಶನಿವಾರ ಉತ್ತರ ಕೊರಿಯಾ ಮತ್ತು ದಕ್ಷಿಣ ಕೊರಿಯಾವನ್ನು ಪ್ರತ್ಯೇಕಿಸುವ ಮಿಲಿಟರಿಮುಕ್ತ ವಲಯದಲ್ಲಿ ಅಮೆರಿಕ ವಾಯುಪಡೆಯ ಬಿ-1ಬಿ ಲ್ಯಾನ್ಸರ್ ಬಾಂಬರ್ ಹಾಗೂ ಫೈಟರ್ ಜೆಟ್ ಗಳು ಹಾರಾಟ ನಡೆಸುವ ಮೂಲಕ ಪರೋಕ್ಷವಾಗಿ ಉತ್ತರ ಕೊರಿಯಾಗೆ ಎಚ್ಚರಿಕೆ ನೀಡಿದೆ. ಆ ಮೂಲಕ ಅಮೆರಿಕ ಅಂತಾರಾಷ್ಟ್ರೀಯ ವಾಯು ಸ್ಥಳದಲ್ಲಿ ತನ್ನ ಬಲಪ್ರದರ್ಶನ ಮಾಡುವ ಮೂಲಕ ರಣಕಹಳೆ ಮೊಳಗಿಸಿದೆ. 21ನೇ ಶತಮಾನದಲ್ಲಿ ಅಮೆರಿಕ ಯುದ್ಧ ವಿಮಾನಗಳು ಇಲ್ಲಿ ಹಾರಾಡುತ್ತಿರುವುದು ಇದೇ ಮೊದಲು.
ಈ ಬಗ್ಗೆ ಸ್ಪಷ್ಟನೆ ನೀಡಿರುವ ಪೆಂಟಗನ್ ಅಮೆರಿಕ ವಾಯುಪಡೆಯ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಇರುವ ಮಿಲಿಟರಿ ಆಯ್ಕೆಗಳ ಬಗ್ಗೆ ವಾಯು ಪ್ರದರ್ಶನದ ಮೂಲಕ ಉತ್ತರಕೊರಿಯಾ ಮಾಹಿತಿ ನೀಡಿದೆ ಎಂದು ಹೇಳಿದೆ. "ಯಾವುದೇ ಅಪಾಯವನ್ನು ಸೋಲಿಸಲು ಅಧ್ಯಕ್ಷರಿಗೆ ಇರುವ ಮಿಲಿಟರಿ ಆಯ್ಕೆಗಳು ಏನೇನು ಎಂಬ ಸಂದೇಶವನ್ನು ಈ ಪ್ರದರ್ಶನ ರವಾನಿಸುತ್ತದೆ" ಎಂದು ವಕ್ತಾರೆ ಡಾನಾ ವೈಟ್ ಹೇಳಿದ್ದಾರೆ. "ನಮ್ಮ ಹಾಗೂ ನಮ್ಮ ಮಿತ್ರ ದೇಶಗಳ ತವರು ಭೂಮಿಯನ್ನು ರಕ್ಷಿಸಿಕೊಳ್ಳುವ ಸಲುವಾಗಿ ಸಂಪೂರ್ಣ ಮಿಲಿಟರಿ ಸಾಮರ್ಥ್ಯವನ್ನು ಬಳಸಿಕೊಳ್ಳಲು ನಾವು ಸಿದ್ಧ" ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಉತ್ತರ ಕೊರಿಯಾದ ವಿದೇಶಾಂಗ ಸಚಿವ ವಿಶ್ವಸಂಸ್ಥೆ ಸಾಮಾನ್ಯ ಸಭೆಯಲ್ಲಿ ಮಾತನಾಡುವ ಕೆಲವೇ ನಿಮಿಷಗಳ ಮೊದಲು ಈ ಯುದ್ಧ ವಿಮಾನಗಳ ಹಾರಾಟ ಪ್ರದರ್ಶನ ನಡೆಸಿವೆ ಎಂದು ತಿಳಿದುಬಂದಿದೆ.