ಇಸ್ಲಾಮಾಬಾದ್: ಉಗ್ರ ಹಫೀಜ್ ಸಯೀದ್ ಬೆಂಬಲಿತ ನೂತನ ರಾಜಕೀಯ ಪಕ್ಷವನ್ನು ನಿಷೇಧಿಸುವಂತೆ ಪಾಕಿಸ್ತಾನ ಆಂತರಿಕ ಸಚಿವಾಲಯ ಚುನಾವಣಾ ಆಯೋಗಕ್ಕೆ ಸೂಚನೆ ನೀಡಿದೆ ಎಂದು ಶನಿವಾರ ತಿಳಿದುಬಂದಿದೆ.
ಲಷ್ಕರ್-ಇ-ತೊಯ್ಬಾಗೆ ಸಂಯೋಜಿತವಾಗಿರುವ ನೂತನ ಪಕ್ಷ ಮಿಲ್ಲಿ ಮುಸ್ಲಿಂ ಲೀಗ್ (ಎಂಎಂಎಲ್) ನೋಂದಣಿಗಾಗಿ ಅರ್ಜಿ ಹಾಕಿತ್ತು. ಈ ಪಕ್ಷವನ್ನು ತಿರಸ್ಕರಿಸುವಂತೆ ಸೆ.22ರಂದು ಪಾಕಿಸ್ತಾನ ಆಂತರಿಕ ಸಚಿವಾಲಯ ಚುನಾವಣಾ ಆಯೋಗಕ್ಕೆ ಸೂಚಿಸಿದೆ ಎಂದು ವರದಿಗಳು ತಿಳಿಸಿವೆ.
ಉಗ್ರ ಹಫೀಜ್ ಸಯೀದ್ ಬೆಂಬಲಿತ ಎಂಎಂಎಲ್ ನೋಂದಣಿಯನ್ನು ಬೆಂಬಲಿಸಲು ಸಾಧ್ಯವಿಲ್ಲ ಎಂದು ಸಚಿವಾಲಯ ಎರಡು ಪುಟಗಳ ಪತ್ರದಲ್ಲಿ ತಿಳಿಸಿದೆ ಹೇಳಲಾಗುತ್ತಿದೆ. ಸಚಿವಾಲಯದ ಈ ಪತ್ರ ಅಧಿಕೃತ ಎಂದು ಚುನಾವಣಾ ಆಯೋಗದ ವಕ್ತಾರರು ಸ್ಪಷ್ಟಪಡಿಸಿದ್ದಾರೆ.
166 ಜನರ ಹತ್ಯೆಗೆ ಕಾರಣವಾದ 2008ರ ಮುಂಬೈ ದಾಳಿಯ ಪ್ರಮುಖ ರೂವಾರಿ ಹಫೀಜ್ ಸಯೀದ್ ನೇತೃತ್ವದ ಲಷ್ಕರ್-ಇ-ತೊಯ್ಬಾ ಸಂಘಟನೆಯನ್ನು ಅಮೆರಿಕ ಈ ಹಿಂದೆ ಭಯೋತ್ಪಾದಕ ಸಂಘಟನೆಯನ್ನು ಘೋಷಿಸಿತ್ತು. ಅಲ್ಲದೆ. ಸಯೀದ್ ತಲೆಗೆ ರೂ.1 ಕೋಟಿ ಡಾಲರ್ ಬಹುಮಾನವನ್ನು ಘೋಷಣೆ ಮಾಡಿತ್ತು.
ಹಫೀಜ್ ಸಯೀದ್ ಪ್ರಸ್ತುತ ಪಾಕಿಸ್ತಾನದ ಗೃಹ ಬಂಧನದಲ್ಲಿದ್ದಾನೆ. ಸಯೀದ್ ಮೇಲಿನ ಆರೋಪಗಳನ್ನು ಪಾಕಿಸ್ತಾನ ಒಪ್ಪಿಕೊಳ್ಳದ ಹಿನ್ನಲೆಯಲ್ಲಿ ಅಮೆರಿಕ ಹಾಗೂ ಭಾರತದ ಜೊತೆಗಿನ ಪಾಕಿಸ್ತಾನದ ಬಾಂಧವ್ಯ ಹಿಂದೆಂದಿಗಿಂತಲೂ ಮತ್ತಷ್ಟು ಹಳಸಿದೆ.