ವಿದೇಶ

ಸಲ್ಮಾನ್ ಖಾನ್ ಓರ್ವ ಮುಸ್ಲಿಂ ಎಂಬ ಕಾರಣಕ್ಕೆ ಈ ಶಿಕ್ಷೆ: ಪಾಕ್ ಸಚಿವ

Vishwanath S
ಇಸ್ಲಾಮಾಬಾದ್: ಕೃಷ್ಣಮೃಗಗಳನ್ನು ಬೇಟೆಯಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲು ಶಿಕ್ಷೆಗೆ ಗುರಿಯಾಗಿರುವ ಬಾಲಿವುಡ್ ನಟ ಸಲ್ಮಾನ್ ಖಾನ್ ಓರ್ವ ಮುಸ್ಲಿಂ ಎಂಬ ಕಾರಣಕ್ಕೆ ಈ ಶಿಕ್ಷೆ ವಿಧಿಸಲಾಗಿದೆ ಎಂದು ಪಾಕಿಸ್ತಾನ ವಿದೇಶಾಂಗ ಸಚಿವ ಖವಾಜಾ ಆಸೀಫ್ ವಿವಾದಾತ್ಮಕ ಹೇಳಿಕೆ ಕೊಟ್ಟಿದ್ದಾರೆ. 
ಪ್ರಕರಣಕ್ಕೆ ಸಂಬಂಧಿಸಿದಂತೆ ಜೋಧ್ ಪುರ ಸೆಷನ್ಸ್ ನ್ಯಾಯಾಲಯ ಸಲ್ಮಾನ್ ಖಾನ್ ದೋಷಿ ಎಂದು ತೀರ್ಪು ನೀಡಿ 5 ವರ್ಷ ಜೈಲು ಶಿಕ್ಷೆ ವಿಧಿಸಿತ್ತು. ಈ ಹಿನ್ನೆಲೆಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಪಾಕ್ ಸಚಿವ ಖವಾಜಾ ಆಸೀಫ್ ಭಾರತದಲ್ಲಿ ಅಲ್ಪಸಂಖ್ಯಾತರ ಬಗ್ಗೆ ಯಾವುದೇ ಕನಿಕರ ಇಲ್ಲ. ಅವರಿಗೆ ಆ ದೇಶದಲ್ಲಿ ರಕ್ಷಣೆ ಇಲ್ಲ ಎಂಬುದು ಮತ್ತೊಮ್ಮೆ ಸಾಬೀತಾಗಿದೆ ಎಂದು ಹೇಳಿದ್ದರು. 
ಸಲ್ಮಾನ್ ಹೆಸರಿನ ಕೊನೆಯಲ್ಲಿ ಖಾನ್ ಇಲ್ಲದಿದ್ದರೆ ತೀರ್ಪು ಬೇರೆ ರೀತಿ ಬರುತ್ತಿತ್ತು ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಭಾರತದ ಅಧಿಕಾರ ಪಕ್ಷದ ಧರ್ಮವನ್ನು ಹೊಂದಿದ್ದರೆ ಈ ಶಿಕ್ಷೆಗೆ ಅವರು ಅನರ್ಹರಾಗುತ್ತಿದ್ದರು ಎಂದು ಆರೋಪಿಸಿದ್ದಾರೆ. 
ಖವಾಜಾ ಆಸೀಫ್ ಹೇಳಿಕೆಗೆ ಟ್ವೀಟರ್ ನಲ್ಲಿ ಸಿಕ್ಕಾಪಟ್ಟೆ ಕಾಮೆಂಟಗಳು ಹರಿದಾಡುತ್ತಿವೆ. ನೆಟೀಗರು ಸಚಿವರನ್ನು ಹಿಗ್ಗಾಮುಗ್ಗಾ ಪ್ರಶ್ನಿಸಿದ್ದಾರೆ. 
ಇದೇ ಪ್ರಕರಣದಲ್ಲಿ ಖುಲಾಸೆಗೊಂಡಿರುವ ಸೈಫ್ ಆಲಿ ಖಾನ್ ಅವರದ್ದು ಯಾವ ಧರ್ಮ ಎಂದು ಮಾನ್ಯ ಸಚಿವರು ತಿಳಿಸಬೇಕೆಂದು ಕೆಲವರು ಪ್ರಶ್ನಿಸಿದ್ದಾರೆ.
SCROLL FOR NEXT