ವಿದೇಶ

ಕಾಬುಲ್: ಅವಳಿ ಆತ್ಮಹತ್ಯಾ ಬಾಂಬ್ ದಾಳಿ, 6 ಪತ್ರಕರ್ತರೂ ಸೇರಿ ಕನಿಷ್ಠ 25 ಮಂದಿ ಸಾವು

Srinivasamurthy VN
ಕಾಬುಲ್: ಆಫ್ಘಾನಿಸ್ತಾನ ರಾಜಧಾನಿ ಕಾಬುಲ್ ನಲ್ಲಿ ನಡೆದ ಅವಳಿ ಆತ್ಮಹತ್ಯಾ ಬಾಂಬ್ ಸ್ಫೋಟದಲ್ಲಿ 6 ಪತ್ರಕರ್ತರೂ ಸೇರಿದಂತೆ ಕನಿಷ್ಠ 25 ಮಂದಿ ಸಾವಿಗೀಡಾಗಿ ಹಲವರು ಗಾಯಗೊಂಡಿದ್ದಾರೆ.
ಕಾಬುಲ್ ನ ಕೇಂದ್ರೀಯ ಶಾಶ್ ದರಕ್ ಪ್ರಾಂತ್ಯದಲ್ಲಿ ಈ ಬಾಂಬ್ ದಾಳಿ ನಡೆದಿದ್ದು, ಮೊದಲ ಬಾಂಬ್ ಸ್ಫೋಟ ಸಂಭವಿಸಿದ ಬಳಿಕ ಅದನ್ನು ವರದಿ ಮಾಡಲು ಪತ್ರಕರ್ತರು ದೌಡಾಯಿಸುತ್ತಿದ್ದಂತೆಯೇ ಮತ್ತೊಂದು ಆತ್ಮಹತ್ಯಾ ದಾಳಿ ನಡೆದಿದೆ. ಈ ವೇಳೆ ಸ್ಥಳೀಯ ಪತ್ರಕರ್ತರೂ, ಅಂತಾರಾಷ್ಟ್ರೀಯ ಪತ್ರಕರ್ತರು ಸೇರಿದಂತೆ ಆರು ಮಂದಿ  ಸಾವನ್ನಪ್ಪಿದ್ದಾರೆ.
ಪ್ರಮುಖವಾಗಿ ಎಎಫ್ ಪಿ ಸುದ್ದಿ ಸಂಸ್ಥೆಯ ಫೋಟೋಗ್ರಾಫರ್, ಕ್ಯಾಮೆರಾಮನ್ ಶಾಹ್ ಮರೈ ಸಾವನ್ನಪ್ಪಿದ್ದು, ಇದಲ್ಲದೆ ಸ್ಥಳೀಯ ಟೋಲೋ ಸುದ್ದಿವಾಹಿನಿ ವರದಿಗಾರ ಕೂಡ ಸಾವನ್ನಪ್ಪಿದ್ದಾನೆ ಎಂದು ಆಫ್ಘನ್ ಆರೋಗ್ಯ ಸಚಿವಾಲಯದ ವಕ್ತಾರರು ತಿಳಿಸಿದ್ದಾರೆ. ಪ್ರಸ್ತುತ ದಾಳಿ ಹೊಣೆಯನ್ನು ಯಾವುದೇ ಉಗ್ರ ಸಂಘಟನೆಗಳು ಹೊತ್ತುಕೊಂಡಿಲ್ಲವಾದರೂ, ಕಾಬುಲ್ ನಲ್ಲಿ ನಿರಂತರವಾಗಿ ಉಗ್ರ ದಾಳಿ ನಡೆಸುವ ತಾಲಿಬಾನ್ ಮತ್ತು ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆಗಳು ಈ ದಾಳಿಯನ್ನೂ ಕೂಡ ನಡೆಸಿರಬಹುದು ಎಂದು ಶಂಕಿಸಲಾಗಿದೆ.
ಇನ್ನು ಪತ್ರಕರ್ತರ ಮೇಲಿನ ದಾಳಿಯನ್ನು ಆಫ್ಘನ್ ಪತ್ರಕರ್ತರ ಭದ್ರತಾ ಸಮಿತಿ ಕಟುವಾಗಿ ಟೀಕಿಸಿದ್ದು, ಸಾವನ್ನಪ್ಪಿದ ಪತ್ರಕರ್ತರ ಆತ್ಮಕ್ಕೆ ಶಾಂತಿಕೋರಿದೆ. ಅಲ್ಲದೆ ದಾಳಿಕೋರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಫ್ಘನ್ ಸರ್ಕಾರಕ್ಕೆ ಮನವಿ ಮಾಡಿದೆ. ಮೊದಲ ದಾಳಿ ನಡೆದ ಶಾಶ್ ದರಕ್ ಪ್ರಾಂತ್ಯಕ್ಕೆ ಕೂಗಳತೆ ದೂರದಲ್ಲೇ ನ್ಯಾಟೋ ಪಡೆಗಳ ಕೇಂದ್ರ ಕಚೇರಿ ಇದ್ದು, ಇಲ್ಲಿ ವರದಿಗಾಗಿ ಆಗಮಿಸಿದ್ದ ಪತ್ರಕರ್ತರನ್ನು ಗುರಿಯಾಗಿಸಿಕೊಂಡು ಎರಡನೇ ದಾಳಿ ನಡೆಸಲಾಗಿದೆ. ಇದು ಉಗ್ರಗಾಮಿಗಳ ವಿಕೃತ ಮನಃಸ್ಥಿತಿಯನ್ನು ತೋರಿಸುತ್ತಿದೆ ಎಂದು ಆಫ್ಘನ್ ಪತ್ರಕರ್ತರ ಭದ್ರತಾ ಸಮಿತಿ ಆಕ್ರೋಶ ವ್ಯಕ್ತಪಡಿಸಿದೆ.
ಇನ್ನು ಮೊದಲ ದಾಳಿ ನಡೆದ ಕೂಡಲೇ ಸ್ಥಳೀಯರು ಸಂತ್ರಸ್ಥರನ್ನು ಆಸ್ಪತ್ರೆಗೆ ಸಾಗಿಸುತ್ತಿದ್ದರೆ. ಆದರೆ ದುರಾದೃಷ್ಟವಶಾತ್ ಅವರೂ ಕೂಡ ಎರಡನೇ ದಾಳಿಗೊಳಗಾಗಿ ಸಂತ್ರಸ್ಥರಾಗಿದ್ದಾರೆ. ಈ ಪೈಕಿ ಹಲವರು ಸಾವನ್ನಪ್ಪಿದ್ದಾರೆ. 
SCROLL FOR NEXT