ಪಾಕ್ ಪ್ರಧಾನಿ ಪದಗ್ರಹಣ: ಮೋದಿಗೆ ಇನ್ನೂ ಇಲ್ಲ ಆಹ್ವಾನ, ಆದರೆ ಈಗಾಗಲೇ ಭಾರತದಿಂದ ಹೊರಟಿದ್ದಾರೆ ಇವರು!
ನವದೆಹಲಿ: ಇಮ್ರಾನ್ ಖಾನ್ ಪಾಕಿಸ್ತಾನ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಳ್ಳುವ ಸಮಾರಂಭಕ್ಕೆ ಭಾರತದ ಪ್ರಧಾನಿಯೂ ಸೇರಿದಂತೆ ಸಾರ್ಕ್ ರಾಷ್ಟ್ರಗಳ ನಾಯಕರಿಗೆ ಆಹ್ವಾನ ನೀಡಬೇಕೆಂಬ ಪ್ರಸ್ತಾವನೆ ಪಿಟಿಐ ಪಕ್ಷದಿಂದ ಬಂದಿತ್ತು. ಆದರೆ ಈ ಬಗ್ಗೆ ಇನ್ನಷ್ಟೇ ಅಧಿಕೃತ ನಿರ್ಧಾರ ಪ್ರಕಟವಾಗಬೇಕಿದೆ.
ಹೇಳಿ ಕೇಳಿ ಇಮ್ರಾನ್ ಖಾನ್ ಕ್ರಿಕೆಟ್ ಹಿನ್ನೆಲೆಯುಳ್ಳವರು, ಜಾಗತಿಕ ಮಟ್ಟದಲ್ಲಿ ಅವರದ್ದೇ ಆದ ಸ್ನೇಹಿತರು, ಅಭಿಮಾನಿಗಳಿದ್ದಾರೆ. ರಾಜಕೀಯವಾಗಿ ಪ್ರಧಾನಿ ನರೇಂದ್ರ ಮೋದಿಗೆ ಆಹ್ವಾನ ಬಂದಿಲ್ಲದೇ ಇರಬಹುದು, ಆದರೆ ಭಾರತದಲ್ಲಿರುವ ಕ್ರಿಕೆಟ್ ಸ್ನೇಹಿತರನ್ನು ಇಮ್ರಾನ್ ಖಾನ್ ಈಗಾಗಲೇ ಆಹ್ವಾನಿಸಿದ್ದಾರೆ. ಇದರ ಹೊರತಾಗಿ ಅಮೀರ್ ಖಾನ್ ಗೂ ಆಹ್ವಾನ ದೊರೆತಿದೆ.
ಮಾಜಿ ಕ್ರಿಕೆಟಿಗ, ಪಂಜಾಬ್ ನ ಕ್ಯಾಬಿನೆಟ್ ಸಚಿವ ನವಜೋತ್ ಸಿಂಗ್ ಸಿಧು, ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರರಾದ ಸುನಿಲ್ ಗವಾಸ್ಕರ್, ಕಪಿಲ್ ದೇವ್ ಅವರನ್ನು ಈಗಾಗಲೇ ಪದಗ್ರಹಣ ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿದ್ದು, "ಕಾರ್ಯಕ್ರಮಕ್ಕೆ ಹೋಗ್ತೀನಿ" ಅಂತ ಪಂಜಾಬ್ ಸಚಿವ ನವಜೋತ್ ಸಿಂಗ್ ಸಿಧು ಹೇಳಿದ್ದಾರೆ.
ಆಹ್ವಾನ ಬಂದಿರುವುದು ಅತ್ಯಂತ ಗೌರವದ ಸಂಗತಿ, ನಾನು ಆಹ್ವಾನವನ್ನು ಸ್ವೀಕರಿಸಿದ್ದೇನೆ, ಬುದ್ಧಿವಂತ ಜನರನ್ನು ಹೊಗಳುತ್ತಾರೆ, ಅಧಿಕಾರದ ಹಿಂದೆ ಹೋಗುವವರನ್ನು ಕಂಡರೆ ಭಯ ಪಡುತ್ತಾರೆ, ಆದರೆ ಉತ್ತಮ ನಡೆ ಹೊಂದಿರುವವರನ್ನು ಎಂದಿಗೂ ನಂಬಬಹುದು ಎಂದು ಇಮ್ರಾನ್ ಖಾನ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದು, ಪಾಕಿಸ್ತಾನದ ಪ್ರಧಾನಿಯಾಗುತ್ತಿರುವ ಇಮ್ರಾನ್ ಖಾನ್ ಅವರನ್ನು ನಂಬಬಹುದು, ನಾನು ಅವರ ಪದಗ್ರಹಣ ಕಾರ್ಯಕ್ರಮಕ್ಕೆ ಹೋಗುತ್ತೇನೆ ಎಂದು ನವಜೋತ್ ಸಿಂಗ್ ಸಿಧು ಹೇಳಿದ್ದಾರೆ.
ವಿದೇಶಗಳ ರಾಜಕೀಯ ನಾಯಕರನ್ನು ಹೊರತುಪಡಿಸಿ, ಭಾರತದ ಕ್ರಿಕೆಟ್ ಹಾಗೂ ಸಿನಿಮಾ ರಂಗದವರಿಗೆ ಇಮ್ರಾನ್ ಖಾನ್ ಆಹ್ವಾನ ನೀಡಿದ್ದು, ವಿದೇಶಗಳ ಪ್ರಧಾನಿ, ಅಧ್ಯಕ್ಷರ ಆಹ್ವಾನದ ಬಗ್ಗೆ ಇಮ್ರಾನ್ ಖಾನ್ ಪಕ್ಷ ಪಾಕ್ ವಿದೇಶಾಂಗ ಇಲಾಖೆ ಅಭಿಪ್ರಾಯ ಕೇಳಿದ್ದು ಶೀಘ್ರವೇ ಅಧಿಕೃತ ಪ್ರಕಟಣೆ ಹೊರಬೀಳುವ ಸಾಧ್ಯತೆ ಇದೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos