ಇಸ್ಲಾಮಾಬಾದ್: ಪಾಕಿಸ್ತಾನದ ನಿಯೋಜಿತ ಪ್ರಧಾನಿ ಇಮ್ರಾನ್ ಖಾನ್ ಅವರಿಗೆ ಕರೆ ಮಾಡಿ ಅಭಿನಂದಿಸಿದ ಪ್ರಧಾನಿ ನರೇಂದ್ರ ಮೋದಿ ಅವರ ನಡೆಯನ್ನು ಪಾಕಿಸ್ತಾನ ಸ್ವಾಗತಿಸಿದ್ದು, ಭಾರತದೊಂದಿಗೆ ಮತ್ತೆ ದ್ವಿಪಕ್ಷೀಯ ಮಾತುಕತೆ ನಡೆಸಲು ಪಾಕ್ ಬಯಸಿದೆ ಎಂದು ಅಲ್ಲಿನ ವಿದೇಶಾಂಗ ಕಚೇರಿ ಗುರುವಾರ ತಿಳಿಸಿದೆ.
2015ರಿಂದ ಭಾರತ-ಪಾಕಿಸ್ತಾನ ದ್ವಿಪಕ್ಷೀಯ ಮಾತುಕತೆ ಸ್ಥಗಿತಗೊಂಡಿದ್ದು, ಈಗ ಮತ್ತೆ ಮಾತುಕತೆ ನಡೆಸಲು ಬಯಸಿರುವ ಪಾಕ್, ಉಭಯ ದೇಶಗಳು ದ್ವಿಪಕ್ಷೀಯ ಸಂಬಂಧದಲ್ಲಿ ಹೊಸ ಅಧ್ಯಾಯ ಆರಂಭಿಸುವ ವಿಶ್ವಾಸವಿದೆ ಎಂದಿದೆ.
ಪ್ರಧಾನಿ ಮೋದಿ ಅವರ ದೂರವಾಣಿ ಕರೆ ಭಾರತ-ಪಾಕಿಸ್ತಾನ ದ್ವಿಪಕ್ಷೀಯ ಮಾತುಕತೆಗೆ ದಾರಿ ಮಾಡಿಕೊಡುವ ವಿಶ್ವಾಸವಿದೆ ಎಂದು ಪಾಕ್ ವಿದೇಶಾಂಗ ಸಚಿವಾಲಯದ ವಕ್ತಾರ ಡಾ.ಮುಹಮ್ಮದ್ ಫೈಸಾಲ್ ಅವರು ಹೇಳಿದ್ದಾರೆ.
ನವೆಂಬರ್ 2016ರಲ್ಲಿ ಮುಂದೂಡಿಕೆಯಾಗಿದ್ದ ಸಾರ್ಕ್ ಶೃಂಗ ಸಭೆ ಆಯೋಜಿಸಲು ಪಾಕಿಸ್ತಾನ ಸಿದ್ಧವಿದ್ದು, ಇದು ಪ್ರಾದೇಶಿಕ ವಿವಾದಗಳ ಕುರಿತು ಚರ್ಚಿಸಲು ಸಹಕಾರಿಯಾಗಲಿದೆ ಎಂದು ಫೈಸಾಲ್ ತಿಳಿಸಿದ್ದಾರೆ.
ಪಾಕಿಸ್ತಾನ ತೆಹ್ರೀಕ್ ಇ ಇನ್ಸಾಫ್(ಪಿಟಿಐ) ಪಕ್ಷ ಪಾಕ್ ಚುನಾವಣೆಯಲ್ಲಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದಕ್ಕೆ ಇಮ್ರಾನ್ ಗೆ ಅಭಿನಂದನೆ ಸಲ್ಲಿಸಿದ ಮೋದಿ, ಪಾಕಿಸ್ಥಾನದಲ್ಲಿ ಪ್ರಜಾಪ್ರಭುತ್ವವು ಆಳಕ್ಕಿಳಿಯಲಿ ಎಂದು ಆಶಿಸುತ್ತೇನೆ ಎಂದು ಹೇಳಿದ್ದಾರೆ. ಜತೆಗೆ, ಹೊಸ ಯುಗದ ಬಾಂಧವ್ಯಕ್ಕೆ ನಾವು ಸಿದ್ಧರಾಗಿದ್ದೇವೆ. ನೆರೆರಾಷ್ಟ್ರಗಳೊಂದಿಗೆ ಶಾಂತಿ ಮತ್ತು ಅಭಿವೃದ್ಧಿ ಬಯಸುತ್ತೇವೆ ಎಂದೂ ಹೇಳಿದ್ದರು.