ವಿದೇಶ

ರಷ್ಯಾ ಶಸ್ತ್ರಾಸ್ತ್ರಗಳ ಖರೀದಿ: ಭಾರತದ ವಿರುದ್ಧದ ಅಮೆರಿಕ ನಿರ್ಬಂಧ ತೆರವು, ಈ ದಿಢೀರ್ ಬೆಳವಣಿಗೆಗೆ ಕಾರಣವೇನು?

Srinivas Rao BV
ನ್ಯೂಯಾರ್ಕ್: ರಷ್ಯಾ ಶಸ್ತ್ರಾಸ್ತ್ರಗಳನ್ನು ಖರೀದಿಸದಂತೆ ಭಾರತದ ವಿರುದ್ಧ ಹೇರಲಾಗಿದ್ದ ನಿರ್ಬಂಧವನ್ನು ತೆರವುಗೊಳಿಸುವುದಕ್ಕೆ ಅಮೆರಿಕ ಕಾಂಗ್ರೆಸ್ ನಲ್ಲಿ ಮಸೂದೆಯನ್ನು ಅಂಗೀಕರಿಸಲಾಗಿದೆ. 
87-10 ಅಂತರದಿಂದ ನ್ಯಾಷನಲ್ ಡಿಫೆನ್ಸ್ ಆಥರೈಸೇಷನ್ ಕಾಯ್ದೆಯ ಮಸೂದೆ ಅಂಗೀಕಾರಗೊಂಡಿದ್ದು, ಮುಂದಿನ ಹಂತದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಸಹಿಗಾಗಿ ಶ್ವೇತ ಭವನವನ್ನು ತಲುಪಲಿದೆ. ಕಾಯ್ದೆಯಲ್ಲಿ ಭಾರತದ ವಿರುದ್ಧವಿದ್ದ ನಿರ್ಬಂಧವನ್ನು ತೆಗೆದುಹಾಕುವ ಅಂಶಗಳಿದ್ದು, ಸಿಎಎಟಿಎಸ್ಎ ಮನ್ನಾ (CAATSA waiver) ಅಂಶದಿಂದಾಗಿ ಭಾರತ ರಷ್ಯಾದ ಎಸ್-400 ವ್ಯವಸ್ಥೆಯನ್ನು ಸುಲಭವಾಗಿ ಆಮದುಮಾಡಿಕೊಳ್ಳುವುದಕ್ಕೆ ಸಾಧ್ಯವಾಗಲಿದೆ ಎಂದು ಅಮೆರಿಕದ ರಾಷ್ಟ್ರೀಯ ಭದ್ರತಾ ಪರಿಷತ್ ನ ಹಿರಿಯ ಸದಸ್ಯರಾದ ಜೋಶುವಾ ವೈಟ್ ತಿಳಿಸಿದ್ದಾರೆ. 
ವಾಸ್ತವದಲ್ಲಿ ರಷ್ಯಾದಿಂದ ಶಸ್ತ್ರಾಸ್ತ್ರಗಳನ್ನು ಆಮದು ಮಾಡಿಕೊಳ್ಳುವ ರಾಷ್ಟ್ರಗಳ ಮೇಲೆ ನಿರ್ಬಂಧಗಳನ್ನು ಮತ್ತಷ್ಟು ಬಿಗಿಗೊಳಿಸುತ್ತಿದ್ದರೂ, ಈ ಮಸೂದೆಯಿಂದ ಭಾರತಕ್ಕೆ ಲಾಭವಾಗಲಿದೆ ಎಂದಿದ್ದಾರೆ ಜೋಶುವಾ ವೈಟ್. ಅಮೆರಿಕ ಕಾಂಗ್ರೆಸ್ ನಲ್ಲಿ ಅಂಗೀಕಾರವಾದ ಮಸೂದೆಯ ಪ್ರಕಾರ " ಅಮೆರಿಕ ಅಧ್ಯಕ್ಷರು ಹೇಳುವ ನಿರ್ದಿಷ್ಟ ರಾಷ್ಟ್ರ ಅಮೆರಿಕದ ರಾಷ್ಟ್ರೀಯ ಹಿತಾಸಕ್ತಿಗಳಿಗೆ ಸಂಬಂಧಿಸಿದ ಅತ್ಯಂತ ಪ್ರಮುಖ ವಿಷಯಗಳಲ್ಲಿ ಸಹಕರಿಸುತ್ತಿದೆ" ಎಂಬುದನ್ನು ದೃಢೀಕರಿಸಲು ಅಮೆರಿಕ ಅಧ್ಯಕ್ಷರಿಗೆ ಅವಕಾಶ ಇರುತ್ತದೆ. ಈ ಅಂಶ ಭಾರತದ ಪರವಾಗಿ ವರ್ಕೌಟ್ ಆಗಿದ್ದು, ರಷ್ಯಾದಿಂದ ಶಸ್ತ್ರಾಸ್ತ್ರಗಳ ಖರೀದಿ ಭಾರತಕ್ಕೆ ಮತ್ತಷ್ಟು ಸುಲಭವಾಗಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ. 
SCROLL FOR NEXT