ಇಸ್ಲಾಮಾಬಾದ್ : ಜುಲೈ 25 ರಂದು ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪಾಕಿಸ್ತಾನದ ಪ್ರಧಾನಮಂತ್ರಿಯಾಗಲು ಕಾಯುತ್ತಿರುವ ಇಮ್ರಾನ್ ಖಾನ್ ಅವರು ಲಿಖಿತ ಕ್ಷಮೆಯಾಚಿಸುವಂತೆ ಪಾಕಿಸ್ತಾನ ಚುನಾವಣಾ ಆಯೋಗ ಒತ್ತಾಯಿಸಿದೆ.
ಎನ್ ಎ-53 ಇಸ್ಲಾಮಾಬಾದ್ ಕ್ಷೇತ್ರದಲ್ಲಿ ಸಾರ್ವಜನಿಕರಿಗೆ ಎದ್ದುಕಾಣುವ ರೀತಿಯಲ್ಲಿ ಬ್ಯಾಲೆಟ್ ಪೇಪರ್ ನಲ್ಲಿ ಪಿಟಿಐ ಮುಖ್ಯಸ್ಥನ ಪೋಟೋ ಕಂಡುಬಂದಿದ್ದನ್ನು ಚುನಾವಣಾ ಆಯೋಗ ಗಮನಿಸಿತ್ತು.
ಈ ಪ್ರಕರಣ ಸಂಬಂಧ ಇಂದು ಚುನಾವಣಾ ಆಯೋಗದ ಆಯುಕ್ತ ಮೊಹಮ್ಮದ್ ರಾಜಾ ಖಾನ್ ನೇತೃತ್ವದಲ್ಲಿನ ನಾಲ್ವರು ಸದಸ್ಯರನ್ನೊಳಗೊಂಡ ಪೀಠದ ಎದುರು ವಿಚಾರಣೆ ನಡೆಯಿತು.
ಪೀಠದ ಎದುರು ಹಾಜರಾದ ಇಮ್ರಾನ್ ಖಾನ್ ಪರ ವಕೀಲರು ಉದ್ದೇಶಪೂರ್ವಕವಾಗಿ ಈ ರೀತಿ ಮಾಡಿರಲಿಲ್ಲ ಎಂದು ಹೇಳಿಕೆ ನೀಡಿದ್ದಾರೆ ಎಂದು ಜಿಯೋ ನ್ಯೂಸ್ ವರದಿ ಮಾಡಿದೆ.
ಇಮ್ರಾನ್ ಖಾನ್ ಅನಮತಿ ಪಡೆಯದೆ ಬ್ಯಾಲೆಟ್ ನಲ್ಲಿ ಪೋಟೋ ಹಾಕಲಾಗಿದೆ .ಬ್ಯಾಲೆಟ್ ಸುರಕ್ಷತೆಗಾಗಿ ಬ್ಯಾಲೆಟ್ ಸುತ್ತ ಹಾಕಲಾಗಿದ್ದ ಪರದೆ ಮತಗಟ್ಟೆಯಲ್ಲಿನ ದಟ್ಟಣೆಯಿಂದ ಕೆಳಗೆ ಬಿದ್ದು ಹೋಗಿದೆ. ಮತಗಟ್ಟೆಯಲ್ಲಿನ ನಿಯಂತ್ರಕ ಅದನ್ನು ತೆಗೆದಿದ್ದಾರೆ ಎಂದು ಪೀಠದ ಎದುರು ಹೇಳಿದ ವಕೀಲ ಅವಾನ್ , ಪ್ರಕರಣವನ್ನು ಅಂತ್ಯಗೊಳಿಸುವಂತೆ ಮನವಿ ಮಾಡಿದ್ದಾರೆ.
ಆದಾಗ್ಯೂ, ಅವಾನ್ ಸಲ್ಲಿಸಿದ ಪ್ರತಿಕ್ರಿಯೆಯನ್ನು ಚುನಾವಣಾ ಆಯೋಗದ ಸಮಿತಿ ವಜಾಗೊಳಿಸಿದ್ದು, ಲಿಖಿತ ಕ್ಷಮೆಯಾಚಿಸುವಂತೆ ಸೂಚಿಸಿದೆ. ವಿಚಾರಣೆಯನ್ನು ನಾಳೆಗೆ ಮುಂದೂಡಲಾಗಿದೆ.