ವಾಷಿಂಗ್ಟನ್: ಬಿಳಿಯರ ಪ್ರಾಬಲ್ಯ, ವರ್ಣಭೇದ ನೀತಿ ಮತ್ತು ನವ ನಾಝಿವಾದಕ್ಕೆ ಅಮೆರಿಕದಲ್ಲಿ ಅವಕಾಶವಿಲ್ಲ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪುತ್ರಿ ಹಾಗೂ ಶ್ವೇತಭವನದ ಸಲಹೆಗಾರ್ತಿ ಇವಾಂಕಾ ಟ್ರಂಪ್ ಸ್ಪಷ್ಟಪಡಿಸಿದ್ದಾರೆ.
ವರ್ಜೀನಿಯಾದ ಚಾರ್ಲೊಟ್ಸವಿಲ್ ನಲ್ಲಿ ಬಿಳಿಯರ ಪ್ರಾಬಲ್ಯ ಪ್ರತಿಪಾದಕರು ನಡೆಸಿದ ರ್ಯಾಲಿಯಿಂದಾಗಿ ನಡೆದ ಅರಾಜಕತೆಯ ಮೊದಲ ವಾರ್ಷಿಕೋತ್ಸವ ಸಂದರ್ಭವನ್ನು ಹಿನ್ನೆಲೆಯಾಗಿಟ್ಟುಕೊಂಡು ಇವಾಂಕಾ ಟ್ರಂಪ್ ಟ್ವೀಟ್ ಮಾಡಿದ್ದು, ಬಿಳಿಯರ ಪ್ರಾಬಲ್ಯ, ವರ್ಣಭೇದ ನೀತಿ ಮತ್ತು ನವ ನಾಝಿವಾದಕ್ಕೆ ಅಮೆರಿಕದಲ್ಲಿ ಅವಕಾಶವಿಲ್ಲ ಎಂದು ಹೇಳಿದ್ದಾರೆ.
'ಒಂದು ವರ್ಷದ ಹಿಂದೆ ಚಾರ್ಲೊಟ್ಸವಿಲ್ ನಲ್ಲಿ ದ್ವೇಷ, ವರ್ಣಭೇದ ನೀತಿ, ಧಾರ್ಮಿಕ ಅಂಧಃಶ್ರದ್ಧೆ ಮತ್ತು ಹಿಂಸಾಚಾರದ ಘಟನೆ ನಡೆದಿತ್ತು. ಅಮೆರಿಕನ್ನರು ಸ್ವಾತಂತ್ರ್ಯ, ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ, ವೈವಿಧ್ಯಮಯ ಅಭಿಪ್ರಾಯವನ್ನು ಸಂರಕ್ಷಿಸುತ್ತಾ ಬಂದಿದ್ದಾರೆ. ಇಂಥ ಸ್ಥಳದಲ್ಲಿ ಬಿಳಿಯರ ಪ್ರಾಬಲ್ಯ, ವರ್ಣಭೇದ ನೀತಿ ಮತ್ತು ನವ ನಾಜಿವಾದಕ್ಕೆ ಅವಕಾಶವಿಲ್ಲ ಎಂದು ಇವಾಂಕಾ ಟ್ವೀಟ್ ಮಾಡಿದ್ದಾರೆ.
ಅಲ್ಲದೆ 'ದ್ವೇಷ, ವರ್ಣಭೇದ ನೀತಿ ಮತ್ತು ಹಿಂಸೆಯ ಮೂಲಕ ಎಲ್ಲರೂ ಕಣ್ಣೀರಿಡುವಂತೆ ಮಾಡುವ ಬದಲು ನಮ್ಮ ಸಂಪೂರ್ಣ ಸಾಮರ್ಥ್ಯವನ್ನು ಬಳಸಿಕೊಳ್ಳುವ ನಿಟ್ಟಿನಲ್ಲಿ ಪರಸ್ಪರ ನೆರವಾಗುವ ಮೂಲಕ ಸಮುದಾಯವನ್ನು ಬಲಗೊಳಿಸೋಣ' ಎಂದು ಸಲಹೆ ನೀಡಿದ್ದಾರೆ.
ಇನ್ನು ಚಾರ್ಲೊಟ್ಸವಿಲ್ ನಂಥದ್ದೇ ರ್ಯಾಲಿಯನ್ನು ಭಾನುವಾರ ಶ್ವೇತಭವನದ ಹೊರಗೆ ಹಮ್ಮಿಕೊಳ್ಳಲು ನಿರ್ಧರಿಸಿರುವ ಹಿನ್ನೆಲೆಯಲ್ಲಿ ಇವಾಂಕಾ ಹೇಳಿಕೆ ಮಹತ್ವ ಪಡೆದಿದೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos