ಇಸ್ಲಾಮಾಬಾದ್: ಪಾಕಿಸ್ತಾನದ ಅಧ್ಯಕ್ಷರು, ಪ್ರಧಾನಿ ಸೇರಿದಂತೆ ಸರ್ಕಾರದ ಮುಖ್ಯಸ್ಥರು ಮತ್ತು ಉನ್ನತ ಅಧಿಕಾರಿಗಳಿಗೆ ಮೊದಲ ದರ್ಜೆಯ ವಿಮಾನ ಯಾನಕ್ಕೆ ನಿಷೇಧ ಹೇರುವ ಪ್ರಸ್ತಾವಕ್ಕೆ ಪ್ರಧಾನಿ ಇಮ್ರಾನ್ ಖಾನ್ ಸಂಪುಟ ಅಸ್ತು ಎಂದಿದೆ.
ನೂತನವಾಗಿ ಅಧಿಕಾರಕ್ಕೇರಿರುವ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಅವರು,ಕುಸಿತದ ಹಾದಿ ಹಿಡಿದಿರುವ ಪಾಕ್ ಆರ್ಥಿಕತೆಯನ್ನು ತಹಬದಿಗೆ ತರಲು ಹಲವು ಪ್ರಮುಖ ನಿರ್ಣಯಗಳನ್ನು ಕೈಗೊಂಡಿದ್ದಾರೆ. ಇಂದು ನಡೆದ ಪ್ರಧಾನಿ ಇಮ್ರಾನ್ ಖಾನ್ ನೇತೃತ್ವದ ಸಂಪುಟ ಸಭೆಯಲ್ಲಿ ದೇಶದ ಅಧ್ಯಕ್ಷರು, ಪ್ರಧಾನಿ, ಸರ್ಕಾರ ಮುಖ್ಯಸ್ಥರು, ನ್ಯಾಯಮೂರ್ತಿಗಳು ಮತ್ತು ಉನ್ನತ ಅಧಿಕಾರಿಗಳ ಮೊದಲ ದರ್ಜೆಯ ವಿಮಾನ ಯಾನವನ್ನು ಸಂಪುಟ ನಿಷೇಧಿಸಿದೆ.
ಪ್ರಧಾನಿ ಇಮ್ರಾನ್ ಖಾನ್ ನೇತೃತ್ವದಲ್ಲಿ , ಅಧಿಕಾರಕ್ಕೆ ಬಂದ ಒಂದೇ ವಾರದೊಳಗೆ ನಡೆದಿರುವ ಎರಡನೇ ಸಚಿವ ಸಂಪುಟ ಸಭೆಯಲ್ಲಿ, ಸರ್ಕಾರಿ ಮುಖ್ಯಸ್ಥರ, ಉನ್ನತಾಧಿಕಾರಿಗಳ ಮೊದಲ ದರ್ಜೆ ವಿಮಾನ ಪ್ರಯಾಣಕ್ಕೆ ಕತ್ತರಿ ಹಾಕಲಾಗಿದೆ. ಮಾತ್ರವಲ್ಲದೆ ಪಾಕ್ ಉನ್ನತಾಧಿಕಾರಿಗಳು ಕಾರ್ಯ ವೇಳಾ ಪಟ್ಟಿಯನ್ನು ಕೂಡ ಸರ್ಕಾರ ಪರಿಷ್ಕರಿಸಿದ್ದು ಹೆಚ್ಚು ಹೊತ್ತು ಕೆಲಸ ಮಾಡುವುದನ್ನು ಕಡ್ಡಾಯಗೊಳಿಸಿದೆ.
ಇದರ ಪರಿಣಾಮವಾಗಿ ಇನ್ನು ಮುಂದೆ ಪಾಕ್ ಪ್ರಧಾನಿ, ವರಿಷ್ಠ ನ್ಯಾಯಮೂರ್ತಿ, ಸೆನೆಟ್ ಅಧ್ಯಕ್ಷರು, ರಾಷ್ಟ್ರೀಯ ಅಸೆಂಬ್ಲಿ ಸ್ಪೀಕರ್ ಮತ್ತು ಮುಖ್ಯ ಮಂತ್ರಿಗಳು ಅಂತಾರಾಷ್ಟ್ರೀಯ ವಿಮಾನಗಳಲ್ಲಿ ಮೊದಲ ದರ್ಜೆಯಲ್ಲಿ ಪ್ರಯಾಣಿಸುವಂತಿಲ್ಲ. ಮತ್ತು ಅವರು ಇನ್ನು ಮುಂದೆ ಬ್ಯುಸಿನೆಸ್ ಅಥವಾ ಕ್ಲಬ್ ಕ್ಲಾಸ್ ಗಳಲ್ಲಿ ಮಾತ್ರವೇ ಪ್ರಯಾಣಿಸಬೇಕಾಗುತ್ತದೆ ಎಂದು ಡಾನ್ ಪತ್ರಿಕೆ ವರದಿ ಮಾಡಿದೆ.
ಪ್ರಧಾನಿ ಇಮ್ರಾನ್ ಖಾನ್ ನೇತೃತ್ವದ ನೂತನ ಪಾಕ್ ಸರ್ಕಾರದ ಈ ನಿರ್ಧಾರಕ್ಕೆ ಕಾರಣವಾಗಿರುವ ಮುಖ್ಯ ಸಂಗತಿ ಎಂದರೆ ಪಾಕಿಸ್ಥಾನದಲ್ಲಿ ಕಾರ್ಯಾಚರಿಸುತ್ತಿರುವ ಅಂತಾರಾಷ್ಟ್ರೀಯ ವಿಮಾನಗಳಲ್ಲಿ ಮೊದಲ ದರ್ಜೆಯ ಪ್ರಯಾಣಕ್ಕೆ ಇತರ ದರ್ಜೆಗಳಿಗಿಂತ 300 ಪಟ್ಟು ಅಧಿಕ ಶುಲ್ಕ ಇದೆ. ಹೀಗಾಗಿ ಇಮ್ರಾನ್ ಅವರು ಸ್ವತಃ ತಾನು ಇನ್ನು ಮುಂದೆ ವಿದೇಶಕ್ಕೆ ವಿಮಾನದಲ್ಲಿ ಪ್ರಯಾಣಿಸುವಾಗ ತನ್ನ ವಿಶೇಷ ವಿಮಾನವನ್ನು ಬಳಸದೆ, ನಿತ್ಯ ಹಾರಾಟಕ್ಕೆ ಲಭ್ಯವಿರುವ ವಿಮಾನಗಳಲ್ಲಿನ ಬ್ಯುಸಿನೆಸ್ ಕ್ಲಾಸ್ ಅಥವಾ ಕ್ಲಬ್ ಕ್ಲಾಸ್ ನಲ್ಲಿ ಮಾತ್ರವೇ ಪ್ರಯಾಣಿಸುವುದಾಗಿ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics