ವಿದೇಶ

ಪ್ರಧಾನಿ ಮೋದಿ ಆಹ್ವಾನ ಒಪ್ಪಿದ ಸಿರಿಲ್ ರಮಫೊಸಾ, ಗಣರಾಜ್ಯೋತ್ಸವ ಮುಖ್ಯ ಅತಿಥಿಯಾಗಿ ದಕ್ಷಿಣ ಆಫ್ರಿಕಾ ಆಧ್ಯಕ್ಷ

Srinivasamurthy VN
ನವದೆಹಲಿ: 2019ನೇ ಸಾಲಿನ ಗಣರಾಜ್ಯೋತ್ಸವದ ಮುಖ್ಯ ಅತಿಥಿಯಾಗಿ ಆಗಮಿಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರು ಮಾಡಿದ್ದ ಆಹ್ವಾನಕ್ಕೆ ದಕ್ಷಿಣ ಆಫ್ರಿಕಾ ಆಧ್ಯಕ್ಷ ಸಿರಿಲ್ ರಮಫೊಸಾ ಶನಿವಾರ ಒಪ್ಪಿಗೆ ನೀಡಿದ್ದಾರೆ.
ಶನಿವಾರ ಈ ಬಗ್ಗೆ ಭಾರತೀಯ ರಾಯಭಾರ ಕಚೇರಿಗೆ ಮಾಹಿತಿ ನೀಡಿರುವ ದಕ್ಷಿಣ ಆಫ್ರಿಕಾ ಅಧಿಕಾರಿಗಳು, ಸಿರಿಲ್ ರಮಫೊಸಾ ಅವರು 2019ನೇ ಸಾಲಿನ ಗಣರಾಜ್ಯೋತ್ಸವದ ಮುಖ್ಯ ಅತಿಥಿಯಾಗಿ ಆಗಮಿಸುವ ಕುರಿತು ಭಾರತ ಮಾಡಿದ್ದ ಮನವಿಯನ್ನು ಪುರಸ್ಕರಿಸಿದ್ದಾರೆ. ಜನವರಿಯಲ್ಲಿ ಅವರು ಭಾರತಕ್ಕೆ ಆಗಮಿಸಲಿದ್ದಾರೆ ಎಂದು ಹೇಳಿದ್ದಾರೆ.
ಕೇಂದ್ರ ಸರ್ಕಾರಿ ಮೂಲಗಳು ತಿಳಿಸಿರುವಂತೆ ಗಣರಾಜ್ಯೋತ್ಸವದ ಮುಖ್ಯ ಅತಿಥಿಯಾಗಿ ಆಗಮಿಸುವಂತೆ ಭಾರತ ಸರ್ಕಾರ ಮಾಡಿದ್ದ ಮನವಿಯನ್ನು ದಕ್ಷಿಣ ಆಫ್ರಿಕಾ ಆಧ್ಯಕ್ಷ ಸಿರಿಲ್ ರಮಫೊಸಾ ಅವರು ಸ್ವೀಕರಿಸಿದ್ದು, ಭಾರತಕ್ಕೆ ಆಗಮಿಸುವುದಾಗಿ ಭರವಸೆ ನೀಡಿದ್ದಾರೆ ಎಂದು ತಿಳಿದುಬಂದಿದೆ.
ಆಫ್ರಿಕಾದ ಗಾಂಧಿ ಎಂದೇ ಖ್ಯಾತರಾಗಿದ್ದ ನೆಲ್ಸನ್ ಮಂಡೇಲಾ ಅವರ ಆಪ್ತರಾಗಿರುವ ಸಿರಿಲ್ ರಮಫೊಸಾ ಅವರನ್ನು ಸ್ವತಃ ನೆಲ್ಸನ್ ಮಂಡೇಲಾ ಅವರು ಮುಂದಿನ ದಕ್ಷಿಣ ಆಫ್ರಿಕಾದ ಅಧ್ಯಕ್ಷೀಯ ಗಾದಿಗೆ ಶಿಫಾರಸ್ಸು ಮಾಡಿದ್ದರು. ಸಿರಿಲ್ ರಮಫೊಸಾ ಕೂಡ ಗಾಂಧಿವಾದಿಗಳಾಗಿದ್ದು, ಇದೇ ಕಾರಣಕ್ಕೆ ಭಾರತ ಸರ್ಕಾರ ಅವರನ್ನು ಗಣರಾಜ್ಯೋತ್ಸವದ ಮುಖ್ಯ ಅತಿಥಿಯಾಗಿ ಆಗಮಿಸುವಂತೆ ಮನವಿ ಮಾಡಿತ್ತು ಎನ್ನಲಾಗಿದೆ.
ಇನ್ನು ಸಿರಿಲ್ ರಮಫೊಸಾ ಅವರಿಗೂ ಮುನ್ನ ಭಾರತ ಸರ್ಕಾರ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಆಹ್ವಾನ ನೀಡಿತ್ತು. ಆದರೆ ವೇಳಾಪಟ್ಟಿ ಗೊಂದಲದ ಹಿನ್ನಲೆಯಲ್ಲಿ ವೈಟ್ ಹೌಸ್ ಭಾರತ ಸರ್ಕಾರದ ಮನವಿಯನ್ನು ತಿರಸ್ಕರಿಸಿತ್ತು.
SCROLL FOR NEXT