ವಿದೇಶ

ಕುಲಭೂಷಣ್ ಜಾದವ್ ಮೇಲೆ ಇನ್ನೂ ಹೆಚ್ಚಿನ ಪ್ರಕರಣ ದಾಖಲು

Nagaraja AB

ಇಸ್ಲಾಮಾಬಾದ್ : ಬೇಹುಗಾರಿಕೆ ಆರೋಪದ ಮೇರೆಗೆ ಪಾಕಿಸ್ತಾನ ಮಿಲಿಟರಿ ನ್ಯಾಯಾಲಯದಿಂದ ಮರಣದಂಡನೆ ಶಿಕ್ಷೆಗೆ ಗುರಿಯಾಗಿ ಜೈಲಿನಲ್ಲಿರುವ  ಭಾರತೀಯ ಪ್ರಜೆ ಕುಲಭೂಷಣ್ ಜಾದವ್ ಮೇಲೆ ಭಯೋತ್ಪಾದನೆ, ವಿಧ್ವಂಸಕ ಕೃತ್ಯಗಳಿಗೆ ಸಂಬಂಧಿತ ಇನ್ನೂ ಹೆಚ್ಚಿನ ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

47 ವರ್ಷದ ಕುಲಭೂಷಣ್ ಜಾದವ್  ಅವರಿಗೆ ಕಳೆದ ವರ್ಷ ಏಪ್ರಿಲ್ ತಿಂಗಳಲ್ಲಿ ಪಾಕಿಸ್ತಾನ ಮಿಲಿಟರಿ ನ್ಯಾಯಾಲಯ ಮರಣದಂಡನೆ ಶಿಕ್ಷೆ ವಿಧಿಸಿತ್ತು.

ಇರಾನ್ ನಿಂದ ಬಂದ ಜಾದವ್ ಅವರನ್ನು  ಮಾರ್ಚ್ 216ರಲ್ಲಿ ಬಲೂಚಿಸ್ತಾನ್ ಪ್ರಾಂತ್ಯದಿಂದ ಬಂಧಿಸಲಾಗಿತ್ತು ಎಂದು ಪಾಕಿಸ್ತಾನ ಭದ್ರತಾ ಪಡೆ ಹೇಳುತ್ತಿದೆ. ಆದರೆ, ಇದನ್ನು ಭಾರತ ತಿರಸ್ಕರಿಸಿದ್ದು, ಈ ವಿವಾದವನ್ನು ಅಂತಾರಾಷ್ಟ್ರೀಯ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರ ಮುಂದೆ ಕಳೆದ ವರ್ಷ ಮೇನಲ್ಲಿ ಇಟ್ಟಿತ್ತು.

ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ಭಾರತ ಸಲ್ಲಿಸಿದ್ದ ಮೇಲ್ಮನವಿಯ ಅಂತಿಮ ತೀರ್ಪು ಕಾಯ್ದಿರಿಸಲಾಗಿದ್ದು, ಜಾದವ್ ಮೇಲೆ ಭಯೋತ್ಪಾದನೆ , ವಿಧ್ವಂಸಕ ಕೃತ್ಯಗಳಿಗೆ ಸಂಬಂಧಿಸಿದ ಹಲವು ಪ್ರಕರಣ ದಾಖಲಿಸಲಾಗಿದೆ. ಈ ಪ್ರಕರಣದ ವಿಚಾರಣೆ ಮುಂದುವರೆದಿದೆ ಎಂದು ಮಾಧ್ಯಮಗಳ ವರದಿ ತಿಳಿಸಿವೆ.

ಈ ಪ್ರಕರಣ ಸಂಬಂಧ 13 ಭಾರತೀಯ ಅಧಿಕಾರಿಗಳಿಂದ ಖಚಿತ ಮಾಹಿತಿ ಪಡೆಯಲಾಗಿದೆ ಆದರೆ, ಅವರ ಹೆಸರನ್ನು ಬಹಿರಂಗಗೊಳಿಸಿಲ್ಲ ಎಂದು ಪಾಕಿಸ್ತಾನ ಮೂಲಗಳಿಂದ ತಿಳಿದುಬಂದಿದೆ.

SCROLL FOR NEXT