ವಿದೇಶ

ಮಾಲ್ಡೀವ್ಸ್ ನಲ್ಲಿ ಭಾರತೀಯ ಮಿಲಿಟರಿ ಹಸ್ತಕ್ಷೇಪಕ್ಕೆ ಚೀನಾ ವಿರೋಧ

Raghavendra Adiga
ಬೀಜಿಂಗ್: ಭಾರತವು ಮಾಲ್ಡೀವ್ಸ್ ನಲ್ಲಿ ಯಾವುದೇ ಮಿಲಿಟರಿ ಹಸ್ತಕ್ಷೇಪವನ್ನು ನಡೆಸುವುದು ಸರಿಯಲ್ಲ ಎಂದು ಚೀನಾ ಹೇಳಿದೆ. ಇಂತಹ ಕ್ರಮವು ಪರಿಸ್ಥಿತಿಯನ್ನು ಇನ್ನಷ್ಟು ಸಂಕೀರ್ಣಗೊಳಿಸುತ್ತದೆ ಎಂದು ಚೀನಾ ಅಭಿಪ್ರಾಯಪಟ್ಟಿದೆ. ಮಾಲ್ಡೀವ್ಸ್ ನ ಮಾಜಿ ಅಧ್ಯಕ್ಷ ಮೊಹಮ್ಮದ್  ನಾಸೀದ್  ದ್ವೀಪರಾಷ್ಟ್ರದಲ್ಲಿನ ರಾಜಕೀಯ ಬಿಕ್ಕಟ್ಟನ್ನು ಪರಿಹರಿಸಲು ಭಾರತದ ಸಹಾಯ ಕೋರಿ ಒಂದು ದಿನದ ನಂತರ ಚೀನಾ ಈ ಪ್ರತಿಕ್ರಿಯೆ ನೀಡಿದೆ.
"ಪ್ರಸಕ್ತ ಪರಿಸ್ಥಿತಿಯನ್ನು ಸಂಕೀರ್ಣಗೊಳಿಸಬಹುದಾದ ಕ್ರಮಗಳನ್ನು ತೆಗೆದುಕೊಳ್ಳುವ ಬದಲು ಮಾಲ್ಡೀವ್ಸ್ ಸಾರ್ವಭೌಮತ್ವವನ್ನು ಗೌರವಿಸುವತ್ತ ಅಂತರಾಷ್ಟ್ರೀಯ ಸಮುದಾಯವು ರಚನಾತ್ಮಕ ಪಾತ್ರ ವಹಿಸಬೇಕು. ಮಾಲ್ಡೀವ್ಸ್ ನಲ್ಲಿ ಸಂಬಂಧಿತ ಪಕ್ಷಗಳು ಸಮಾಲೋಚನೆಯ ಮೂಲಕ ಸಮಸ್ಯೆಯನ್ನು ಪರಿಹರಿಸಿಕೊಳ್ಳಬಹುದು ಮತ್ತು ಸಾಧ್ಯವಾದಷ್ಟು ಬೇಗ ರಾಷ್ಟ್ರೀಯ ಸ್ಥಿರತೆಯನ್ನು ಮತ್ತು ಶಾಂತಿಯನ್ನು ಪುನಃಸ್ಥಾಪಿಸಬಹುದೆಂದು ನಾವು ಭಾವಿಸುತ್ತೇವೆ " ಚೀನೀ ವಿದೇಶಾಂಗ ಸಚಿವಾಲಯದ ವಕ್ತಾರ ಗೀಂಗ್ ಶುವಾಂಗ್ ಹೇಳಿದರು. ಭಾರತದ ಹೆಸರನ್ನು ನೇರವಾಗಿ ಉಲ್ಲೇಖಿಸದೆ ಚೀನಾ ವಕ್ತಾರರು ಮಾತನಾಡಿದ್ದಾರೆ.
ದೇಶಭ್ರಷ್ಟರಾಗಿ ಈಗ ಶ್ರೀಲಂಕಾದಲ್ಲಿರುವ ಮಾಲ್ಡೀವ್ಸ್ ಮಾಜಿ ಅಧ್ಯಕ್ಷ ನಶೀದ್ ರಾಜಕೀಯ ಪಕ್ಷಗಳ ನಾಯಕರನ್ನು  ಬಿಡುಗಡೆ ಮಾಡಲು ಭಾರತ ತನ್ನ ನೆರವನ್ನು ನಿಡಬೇಕೆಂದು ನಿನ್ನೆ ಟ್ವೀಟ್ ಮಾಡಿ ಕೋರಿದ್ದರು.
ಜೈಲಿನಲ್ಲಿರುವ ಒಂಭತ್ತು ಮಂದಿ ವಿರೋಧ ಪಕ್ಷದ ನಾಯಕರನ್ನು ಬಿಡುಗಡೆ ಮಾಡಲು ಮಾಲ್ಡೀವ್ಸ್  ಸುಪ್ರೀಂ ಕೋರ್ಟ್ ಆದೇಶಿಸಿದ ಬೆನ್ನಲ್ಲಿಯೇ ದ್ವೀಪರಾಷ್ಟ್ರದಲ್ಲಿ ರಾಜಕೀಯ ಅಸ್ಥಿರತೆ ಉಂಟಾಗಿತ್ತು.
SCROLL FOR NEXT