ವಿದೇಶ

ಪ್ಯಾಲೆಸ್ತೇನ್ ಜನರ ಹಿತಾಸಕ್ತಿಗೆ ಭಾರತ ಬದ್ಧವಾಗಿದೆ: ಪ್ರಧಾನಿ ಮೋದಿ

Lingaraj Badiger
ರಮಲ್ಲಾಹ್: ಭಾರತ ಮತ್ತು ಪ್ಯಾಲೆಸ್ತೀನ್‌ ಬಾಂಧವ್ಯ ಪರೀಕ್ಷೆಯಲ್ಲಿ ಗೆದ್ದು ಮತ್ತಷ್ಟು ಗಟ್ಟಿಗೊಂಡಿವೆ. ಭಾರತದ ವಿದೇಶಾಂಗ ನೀತಿಯಲ್ಲಿ ಪಶ್ಚಿಮ ಏಷ್ಯಾದ ರಾಷ್ಟ್ರಕ್ಕೆ ಯಾವತ್ತೂ ಮೊದಲ ಆದ್ಯತೆ ಎಂದು ಐತಿಹಾಸಿಕ ಪ್ಯಾಲೆಸ್ತೇನ್ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಹೇಳಿದ್ದಾರೆ.
ಇಂದು ಪ್ಯಾಲೆಸ್ತೀನ್‌ ಅಧ್ಯಕ್ಷ ಮಹಮೌದ್ ಅಬ್ಬಾಸ್‌ ಜತೆಗೆ ಜಂಟಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ, ಪಶ್ಚಿಮ ಏಷ್ಯಾದಲ್ಲಿ ಶಾಂತಿ ಮರುಸ್ಥಾಪನೆಯಾಗಬಹುದೆಂಬ ಆಶಯ ವ್ಯಕ್ತಪಡಿಸಿದರು. 
ಪ್ಯಾಲೆಸ್ತೇನ್ ಜನರ ಹಿತಾಸಕ್ತಿಗೆ ಭಾರತ ಬದ್ಧವಾಗಿದೆ ಎಂದು ನಾನು ಅಧ್ಯಕ್ಷ ಅಬ್ಬಾಸ್‌ ಅವರಿಗೆ ಭರವಸೆ ನೀಡಿದ್ದೇನೆ, ಎರಡೂ ದೇಶಗಳ ನಡುವೆ ವಿದ್ಯಾರ್ಥಿಗಳ ವಿನಿಮಯ ಕಾರ್ಯಕ್ರಮ ನಡೆಯುತ್ತಿದ್ದು, ಈ ಮಿತಿಯನ್ನು 50ರಿಂದ 100ಕ್ಕೆ ಹೆಚ್ಚಿಸುತ್ತಿರುವುದಾಗಿ ಮೋದಿ ಪ್ರಕಟಿಸಿದರು.
ಈ ವೇಳೆ ಮಾತನಾಡಿದ ಪ್ಯಾಲೆಸ್ತೇನ್ ಅಧ್ಯಕ್ಷ ಮಹಮೌದ್ ಅಬ್ಬಾಸ್ ಅವರು, ಇಸ್ರೇಲ್‌ ಜತೆಗೆ ಶಾಂತಿ ಪ್ರಕ್ರಿಯೆಗೆ ನೆರವಾಗುವಲ್ಲಿ ಭಾರತ ಮಹತ್ವದ ಪಾತ್ರ ವಹಿಸಬೇಕೆಂದು ನಾವು ಬಯಸುತ್ತೇವೆ ಎಂದರು.
ಇದಕ್ಕು ಮುನ್ನ ಪ್ರಧಾನಿ ಮೋದಿ ಮತ್ತು ಅಧ್ಯಕ್ಷ ಅಬ್ಬಾಸ್‌ ಪ್ರಮುಖ ದ್ವಿಪಕ್ಷೀಯ ಒಪ್ಪಂದಗಳನ್ನು ವಿನಿಮಯ ಮಾಡಿಕೊಂಡರು. ಬಳಿಕ ಮಾತನಾಡಿದ ಅಬ್ಬಾಸ್, ಭಾರತದ ನಾಯಕರು ಯಾವತ್ತೂ ಪ್ಯಾಲೆಸ್ತೀನ್‌ ಶಾಂತಿ ಸ್ಥಾಪನೆಗೆ ಬೆಂಬಲವಾಗಿದ್ದಾರೆ ಎಂದರು.
SCROLL FOR NEXT