ಡೋಕ್ಲಾಮ್ ಚೀನಾಗೆ ಸೇರಿದ್ದು; ಮತ್ತೊಮ್ಮೆ ಬಿಕ್ಕಟ್ಟು ಸೃಷ್ಟಿಸದಂತೆ ಭಾರತಕ್ಕೆ ಎಚ್ಚರಿಕೆ
ಬೀಜಿಂಗ್: ಡೋಕ್ಲಾಮ್ ಒಂದು ವಿವಾದಾತ್ಮಕ ಪ್ರದೇಶ ಎಂದಿದ್ದ ಭಾರತೀಯ ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಅವರ ಇತ್ತೀಚಿನ ಹೇಳಿಕೆಯನ್ನು ಉದ್ದರಿಸಿದ ಚೀನಾ ಇಂದು ಪ್ರತಿಕ್ರಯಿಸಿದ್ದು ಭಾರತವು ಕಳೆದ ವರ್ಷದ 73 ದಿನಗಳ ಉದ್ವಿಗ್ನ ಪರಿಸ್ಥಿತಿಯನ್ನು ಗಮನದಲ್ಲಿರಿಸಿಕೊಳ್ಳಬೇಕು. ಮತ್ತೊಮ್ಮೆ ಅಂತಹಾ ಉದ್ವಿಗ್ನ ವಾತಾವರಣ ಉಂಟಾಗದಂತೆ ಎಚ್ಚರ ವಹಿಸಬೇಕು ಎಂದಿದೆ.
ಬಿಪಿನ್ ರಾವತ್ ಹೇಳಿಕೆಗೆ ಇದೇ ಪ್ರಥಮ ಬಾರಿಗೆ ಪ್ರತಿಕ್ರಯಿಸಿದ ಚೀನಾ ರಕ್ಷಣಾ ಇಲಾಖೆ ವಕ್ತಾರ ಕರ್ನಲ್ ವೂ ಕಿಯಾನ್ ಡೋಕ್ಲಾಮ್ ಚೀನಾದ ಅಧಿಕೃತ ಭಾಗವಾಗಿದೆ ಎಂದಿದ್ದಾರೆ.
"ಬಾರತವು ಇದೀಗ ಪಾಕಿಸ್ತಾನದ ಗಡಿಗಿಂತ ಹೆಚ್ಚು ಚೀನಾ ಗಡಿಯತ್ತ ಗಮನ ನೀಡಬೇಕಿದೆ. ಚೀನಾ ತನ್ನ ಗಡಿಯುದ್ದದ ಪ್ರದೇಶದ ಮೇಲೆ ಬೀಜಿಂಗ್ ನಿಂದ ನೇರ ನಿಯಂತ್ರಣ ಹೊಂದಿದೆ. ಹಿಗಾಗಿ ನಾವು ಸದಾ ಜಾಗೃತವಾಗಿರಬೇಕು "ಎಂದು ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಈ ತಿಂಗಳ ಪ್ರಾರಂಭದಲ್ಲಿ ಹೇಳಿಕೆ ನೀಡಿದ್ದರು.
"ಚೀನಾದ ಪೀಪಲ್ಸ್ ಲಿಬರೇಶನ್ ಆರ್ಮಿ (ಪಿಎಲ್ಎ) ಉತ್ತರ ಡೋಕ್ಲಾಮ್a ಎಂದು ಕರೆಯಲ್ಪಡುವ ಟೋರ್ಸಾ ನಲ್ಲಾ ಪಶ್ಚಿಮದ ಪ್ರದೇಶವನ್ನು ಆಕ್ರಮಿಸಿದೆ. ಈ ಸ್ಥಳದಲ್ಲಿ ಎರಡೂ ಭಾಗಗಳನ್ನು ಒಳಗೊಂಡು ಚೀನಾ ಡೇರೆಗಳನ್ನು ನಿರ್ಮಿಸಿದೆ. ಅಲ್ಲದೆ ಅಲ್ಲಿ ತನ್ನ ವೀಕ್ಷಣಾ ಪೋಸ್ಟ್ ಗಳನ್ನು ಸ್ಥಾಪಿಸಿದೆ. ಆದರೆ ಇದು ನಿಜವಾಗಿಯೂ ಭೂತಾನ್ ಮತ್ತು ಚೀನಾ ನಡುವೆ ಇರುವ ವಿವಾದಿತ ಪ್ರದೇಶವಾಗಿದೆ" ಎಂದು ಭಾರತೀಯ ಸೇನಾ ಮುಖ್ಯಸ್ಥರಾದ ಜನರಲ್ ಬಿಪಿನ್ ರಾವತ್ ಜ.12 ಸೇನಾ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಹೇಳಿದ್ದರು.