ಜೈಷ್-ಇ-ಮೊಹಮ್ಮದ್ ಉಗ್ರ ಸಂಘಟನೆಯ ಸ್ಥಾಪಕ ಮೌಲಾನಾ ಮಸೂದ್ ಅಜರ್
ಇಸ್ಲಾಮಾಬಾದ್: ಭಾರತ ಮತ್ತು ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ನಮ್ಮ ನಂ.1 ಶತ್ರು ಎಂದು ಪಾಕಿಸ್ತಾನ ಮೂಲದ ಜೈಷ್-ಇ-ಮೊಹಮ್ಮದ್ ಉಗ್ರ ಸಂಘಟನೆ ಗುರುವಾರ ಘೋಷಣೆ ಮಾಡಿದೆ.
ಸಿಂಧ್'ನ ಲರ್ಕಾನಾ ಎಂಬ ಪ್ರದೇಶದಲ್ಲಿ ನಡೆಸಲಾಗುತ್ತಿದ್ದ ರ್ಯಾಲಿಯಲ್ಲಿ ಪಾಲ್ಗೊಂಡಿದ್ದ ಜೈಷ್-ಇ-ಮೊಹಮ್ಮದ್ ಉಗ್ರ ಸಂಘಟನೆಯ ಸ್ಥಾಪಕ ಮೌಲಾನಾ ಮಸೂದ್ ಅಜರ್ ಸಹೋದರ ಮೌಲಾನಾ ತಲ್ಹಾ ಸೈಫ್ ಈ ಘೋಷಣೆಯನ್ನು ಮಾಡಿದ್ದಾನೆಂದು ತಿಳಿದುಬಂದಿದೆ.
ಭಾರತ ಜೈಷ್-ಇ-ಮೊಹಮ್ಮದ್ ಸಂಘಟನೆಯ ನಂ.1 ಶತ್ರು. ಹಾಗೆಯೇ ಆ ರಾಷ್ಟ್ರದ ಪ್ರಧಾನಮಂತ್ರಿ ಕೂಡ ನಮಗೆ ನಂ.1 ಶತ್ರು ಎಂದು ಹೇಳಿದ್ದಾನೆ.
ಜೈಷ್-ಇ-ಮೊಹಮ್ಮದ್ ಸಂಘಟನೆಯ ಮುಖವಾಣಿ ಅಲ್-ಕಲಾಮ್'ನ್ನು ಭಾರತದಲ್ಲಿರುವ ಮುಸ್ಲಿಮರು ಪ್ರತೀನಿತ್ಯ ಓದುತ್ತಿದ್ದಾರೆ. ವಾರದಲ್ಲಿ ಮಂಗಳವಾರ, ಬುಧವಾರ ಅಲ್-ಕಲಾಮ್ ಪ್ರಕಟಣೆಗೊಳ್ಳುತ್ತಿದೆ. ಮುಖವಾಣಿಯ ಪ್ರತಿ ನಿಮಗೆ ಸಿಗದೇ ಹೋಗಬಹುದು. ಭಾರತದಲ್ಲಿರುವ ನಿಮ್ಮ ಸಂಬಂಧಿಕರು ಮಸೂದ್ ಅವರ ಅಲ್-ಕಲಾಮ್'ನ್ನು ಓದುತ್ತಿರುತ್ತಾರೆ. ಅಲ್-ಕಲಾಮ್ ವಿರುದ್ಧ ಭಾರತೀಯ ಮಾಧ್ಯಮಗಳು ದನಿಯೆತ್ತಿವೆ. ಈ ರೀತಿಯಾಗಿ ನಮ್ಮ ಶತ್ರುಗಳು ಭಾರತದಲ್ಲಿ ನಮ್ಮ ಕಾರ್ಯಗಳನ್ನು ಆರಂಭಿಸಿವೆ ಎಂದು ತಿಳಿಸಿದ್ದಾರೆ.
ಜೀವನದಲ್ಲಿ ಏನಾದರೂ ಸಾಧಿಸಬೇಕೆಂದರೆ, ಮುಸ್ಲಿಮರು ಜಿಹಾದ್ ಹಾದಿಯನ್ನು ಅನುಸರಿಸಬೇಕು. ಭಾರತ ಮಿನಿ ಸೂಪರ್ ಪವರ್ ದೇಶವಾಗಿದ್ದು, ಕಳೆದ 60 ವರ್ಷಗಳಿಂದಲೂ ಪಾಕಿಸ್ತಾನಕ್ಕೆ ತೊಂದರೆಯನ್ನು ಕೊಡುತ್ತಲೇ ಇದೆ. ಆದರೆ, ಕಾಶ್ಮೀರದಲ್ಲಿ ಭಾರತದ 6 ಲಕ್ಷ ಯೋಧರು ಸಾಕಷ್ಟು ಶ್ರಮಪಡುತ್ತಿದ್ದರು, ಕಾಶ್ಮೀರದಲ್ಲಿ ಗೆಲವು ಸಾಧಿಸಲು ಸಾಧ್ಯವಾಗುತ್ತಿಲ್ಲ. 2016 ಜನವರಿ ತಿಂಗಳಲ್ಲಿ ಪಠಾಣ್ ಕೋಟ್ ವಾಯುನೆಲೆ ಮೇಲೆ ನಡೆದ ದಾಳಿ ಸೇರಿದಂತೆ ಜಮ್ಮು ಮತ್ತು ಕಾಶ್ಮೀರ ಹಾಗೂ ವಿವಿಧ ರಾಜ್ಯಗಳ ಗಡಿಯಲ್ಲಿ ನಡೆದ ಸಾಕಷ್ಟು ದಾಳಿಗಳನ್ನು ಜೈಷ್-ಇ-ಮೊಹಮ್ಮದ್ ಉಗ್ರ ಸಂಘಟನೆಯೇ ನಡೆಸಿತ್ತು.
ಕಾಶ್ಮೀರದಲ್ಲಿರುವ ನಮ್ಮ ತಾಯಿಯಂದಿರು ಹಾಗೂ ಸಹೋದರಿಯರು ನಮ್ಮನ್ನು ಕೂಗುತ್ತಿದ್ದಾರೆ. ಗುಲಾಮರಾಗಿದ್ದ ನಾವು ಈ ಹಿಂದೆ ಗಡಿದಾಟಲು ಸಾಧ್ಯವಾಗುತ್ತಿರಲಿಲ್ಲ .ಆದರೆ, ಇಂದು ಮುಜಾಹಿದ್ದೀನ್ ಗಳು ಗಡಿಯನ್ನು ಮುಕ್ತವಾಗಿ ದಾಟುವಂತಾಗಿದೆ ಎಂದಿದ್ದಾನೆ.
ಇದೇ ವೇಳೆ ಅಯೋಧ್ಯೆ ರಾಮ ಮಂದಿರ ವಿಚಾರವನ್ನು ಪ್ರಸ್ತಾಪ ಮಾಡಿರುವ ಮೌಲಾನಾ ಸೈಫ್, ಬಾಬ್ರಿ ಮಸೀದಿ ಇದ್ದ ಸ್ಥಳದಲ್ಲಿ ರಾಮ ಮಂದಿನ ನಿರ್ಮಾಣ ಮಾಡಲು ಭಾರತ ಸರ್ಕಾರ ಯತ್ನ ನಡೆಸುತ್ತಿದೆ. ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಮಾಡಲು ನಾವು ಬಿಡುವುದಿಲ್ಲ ಎಂದು ತಿಳಿಸಿದ್ದಾನೆ.
ಪ್ರತೀವರ್ಷ ಸರ್ಕಾರ ಇಂತಹ ದಿನದಂದು ರಾಮ ಮಂದಿರವನ್ನು ನಿರ್ಮಾಣ ಮಾಡಲಾಗುತ್ತದೆ ಎಂದು ಘೋಷಣೆ ಮಾಡುತ್ತಲೇ ಇರುತ್ತದೆ. ನಮ್ಮ ಕಡೆಯಿಂದಲೂ ಮಂದಿರ ನಿರ್ಮಾಣ ಮಾಡುವುದಕ್ಕೆ ಬಿಡುವುದಿಲ್ಲ ಎಂಬ ಘೋಷಣೆಗಳು ಕೇಳಿ ಬರುತ್ತವೆ. ಘೋಷಣೆಗಳು ಕೇಳಿಬರುತ್ತಲೇ ಇದ್ದರೂ ಅಯೋಧ್ಯೆಯಲ್ಲಿ ರಾಮ ಮಂದಿನ ಇನ್ನೂ ನಿರ್ಮಾಣವಾಗಿಲ್ಲ ಎಂದು ಹೇಳಿಕೊಂಡಿದ್ದಾನೆ.
ಪ್ರಜಾಪ್ರಭುತ್ವ ರಾಷ್ಟ್ರಗಳ ಮೇಲೆ ಮೌಲಾನಾ ತಲ್ಹಾ ಸೈಫ್ ನಂತಹ ಉಗ್ರರು ಜಿಹಾದ್ ಹೇರಲು ಬಹಿರಂಗವಾಗಿಯೇ ಘೋಷಣೆ ಮಾಡುತ್ತಿದ್ದರೂ, ಭಯೋತ್ಪಾದನೆ ವಿರುದ್ದ ಕ್ರಮ ಕೈಗೊಳ್ಳುತ್ತಿದ್ದೇವೆಂದು ಹೇಳಿಕೆ ನೀಡುತ್ತಲೇ ಇರುವ ಪಾಕಿಸ್ತಾನ ಮಾತ್ರ ಮೂಕ ಪ್ರೇಕ್ಷಕನಂತಿದೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos