ಭಾರತೀಯನ ವಿದ್ಯಾರ್ಥಿ ಶರತ್ ಕೊಪ್ಪು
ಕನ್ಸಾಸ್; ಭಾರತೀಯನ ವಿದ್ಯಾರ್ಥಿ ಶರತ್ ಕೊಪ್ಪು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಹುಡುಕಿಕೊಟ್ಟವರಿಗೆ 10,000 ಡಾಲರ್ ಇನಾಮು ನೀಡುವುದಾಗಿ ಕನ್ಸಾಸ್ ಪೊಲೀಸರು ಭಾನುವಾರ ಘೋಷಣೆ ಮಾಡಿದ್ದಾರೆ.
ಕನ್ಸಾಸ್ ನ ಮಿಸ್ಸೌರಿ ವಿಶ್ವವಿದ್ಯಾಲಯದಲ್ಲಿ ವಿದ್ಯಾಬ್ಯಾಸ ನಡೆಸುತ್ತಿದ್ದ 26 ವರ್ಷದ ದಕ್ಷಿಣ ಭಾರತ ಮೂಲದ ವಿದ್ಯಾರ್ಥಿಯನ್ನು ನಿನ್ನೆಯಷ್ಟೇ ದುಷ್ಕರ್ಮಿಗಳು ಗುಂಡಿಟ್ಟು ಹತ್ಯೆ ಮಾಡಿದ್ದರು.
ಕ್ಯಾನ್ಸಾಸ್ ನ ಮಾರ್ಕೆಟ್ ಪ್ರದೇಶದಲ್ಲಿ ದುಷ್ಕರ್ಮಿಗಳು ನಡೆಸಿದ ಗುಂಡಿನ ದಾಳಿಗೆ ತೆಲಂಗಾಣ ಮೂಲದ ವಿದ್ಯಾರ್ಥಿ ಶರತ್ ಕೊಪ್ಪು ಗಂಭೀರವಾಗಿ ಗಾಯಗೊಂಡಿದ್ದರು. ಬಳಿಕ ಆಸ್ಪತ್ರೆಗೆ ದಾಖಲಿಸುವ ಮಾರ್ಗದ ಮಧ್ಯೆ ಶರತ್ ಸಾವನ್ನಪ್ಪಿದ್ದರು.
ಪ್ರಕರಣ ಸಂಬಂಧ ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿರುವ ಕನ್ಸಾಸ್ ನಗರ ಪೊಲೀಸರು, ಶಂಕಿತರ ಕುರಿತು ಯಾವುದೇ ರೀತಿಯ ಮಾಹಿತಿಗಳನ್ನು ನೀಡಿದರೂ ಹಾಗೂ ಆರೋಪಿಗಳನ್ನು ಹಿಡಿದುಕೊಟ್ಟವರಿಗೆ 10,000 ಬಹುಮಾನ ನೀಡುವುದಾಗಿ ಘೋಷಣೆ ಮಾಡಿದ್ದಾರೆ.
ಘಟನೆ ಸಂಬಂಧ ಪೊಲೀಸರಿಗೆ ಕೆಲ ಸಿಸಿಟಿವಿ ದೃಶ್ಯಾವಳಿಗಳೂ ಕೂಡ ಲಭ್ಯವಾಗಿದ್ದು, ಆರೋಪಿ ಕೈನಲ್ಲಿ ಟವಲ್ ಹಿಡಿದುಕೊಂಡು ಏನನ್ನೋ ಹುಡುಕಿಕೊಂಡು ಒಂದು ರೂಮಿನಿಂದ ಮತ್ತೊಂದು ರೂಮಿಗೆ ಓಡಾಡುತ್ತಿರುವುದು ಕಂಡು ಬಂದಿದೆ.
ಕಳೆದ ವರ್ಷ ಇದೇ ಹೈದರಾಬಾದ್ ಮೂಲದ ಟೆಕ್ಕಿ ಶ್ರೀನಿವಾಸ್ ಕುಚ್ಚಿಬೋಟ್ಲಾರನ್ನು ಅಮೆರಿಕ ನೌಕಾದಳದ ಅಧಿಕಾರಿಯೊಬ್ಬ ಗುಂಡಿಟ್ಟು ಕೊಂದು ಹಾಕಿದ್ದ. ಮೇ ತಿಂಗಳಲ್ಲಿ ಈ ಪ್ರಕರಣದ ತೀರ್ಪು ಬಂದಿದ್ದು, ಆರೋಪಿ ಆ್ಯಡಂ ಪುರಿಂಟನ್ ಗೆ ಅಮೆರಿಕ ಕೋರ್ಟ್ ಜೀವಾವಧಿ ಶಿಕ್ಷೆ ವಿಧಿಸಿದೆ.