ಸುದ್ದಿಗೋಷ್ಟಿಯಲ್ಲಿ ಶೆಹಬಾಜ್ ಶರೀಫ್
ಇಸ್ಲಾಮಾಬಾದ್: ಭಾರತ ದೇಶ ಅನೇಕ ವಿಭಾಗಗಳಲ್ಲಿ ಪಾಕಿಸ್ತಾನವನ್ನು ಹಿಂದಿಕ್ಕಿದ್ದು, ಪ್ರಧಾನಿ ಮೋದಿ ಜಿ20 ಶೃಂಗಸಭೆಯಲ್ಲಿ ಪಾಲ್ಗೊಂಡಿದ್ದರೆ, ನಾವು ಪಾಕಿಸ್ತಾನದಲ್ಲಿ ಕುಳಿತು ಕೈ ಕೈ ಹಿಸುಕಿಕೊಳ್ಳುತ್ತಿದ್ದೇವೆ ಎಂದು ಪಾಕಿಸ್ತಾನ ದ ಮಾಜಿ ಪ್ರಧಾನಿ ನವಾಜ್ ಷರೀಫ್ ಅವರ ಸಹೋದರ ಶೆಹಬಾಜ್ ಶರೀಫ್ ಹೇಳಿದ್ದಾರೆ.
ಪನಾಮಾ ಹಗರಣಕ್ಕೆ ಸಂಬಂಧಿಸಿದಂತೆ ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಷರೀಪ್ ಬಂಧನಕ್ಕೆ ಪಾಕ್ ಸುಪ್ರೀಂ ಕೋರ್ಟ್ ಆದೇಶ ನೀಡಿದ ಪರಿಣಾಮ ಪಾಕಿಸ್ತಾನದ ಪಿಎಂಎಲ್ ಎನ್ ಪಕ್ಷ ಸೂತ್ರ ಹರಿದ ಗಾಳಿಪಟದಂತಾಗಿತ್ತು. ಇದೀಗ ಆ ಪಕ್ಷದ ಉಸ್ತುವಾರಿಯನ್ನು ನವಾಜ್ ಶರೀಫ್ ಸಹೋದರ ಶೆಹಬಾಜ್ ಶರೀಫ್ ವಹಿಸಿಕೊಂಡಿದ್ದು, ಇಂದು ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು ಭಾರತವನ್ನು ಉದ್ದೇಶಿಸಿ ತಮ್ಮದೇ ದೇಶದ ರಾಜಕೀಯ ಮುಖಂಡರ ಕುರಿತು ತೀವ್ರ ವಾಗ್ದಾಳಿ ನಡೆಸಿದರು.
'ಭಾರತ ದೇಶ ಸಾಕಷ್ಟು ವಿಭಾಗಗಳಲ್ಲಿ ಪಾಕಿಸ್ತಾನಕ್ಕಿಂತ ಮುಂದಿದೆ. ನಮ್ಮ ಕೈಯಲ್ಲಿದ್ದ ಬಾಂಗ್ಲಾದೇಶ ಭಾರತದಿಂದಾಗಿ ಕೈ ಜಾರಿದೆ. ನಮ್ಮದೇ ಯೊಜನೆಗಳಿಂದ ಸ್ಪೂರ್ತಿ ಪಡೆದ ಶ್ರೀಲಂಕಾ, ಸಿಂಗಾಪುರ, ಚೀನಾ ದೇಶಗಳು ಅಭಿವೃದ್ಧಿ ಪಥದತ್ತ ಸಾಗುತ್ತಿದ್ದು, ನಾವು ಮಾತ್ರ ಆ ದೇಶಗಳ ಹಿಂದೆ ಬಿದ್ದಿದ್ದೇವೆ. ಈಗಲಾದರೂ ನಾವು ಪಾಠ ಕಲಿಯದಿದ್ದರೇ ಹೇಗೆ. ಇಂದು ಹಿಂದೂಸ್ತಾನ (ಭಾರತ) ಜಿ20 ಶೃಂಗಸಭೆಯಲ್ಲಿ ಪಾಲ್ಗೊಳ್ಳುತ್ತಿದೆ. ಭಾರತದ ಪ್ರಧಾನಿ ಜಿ20 ಶೃಂಗಸಭೆಯಲ್ಲಿ ಪಾಲ್ಗೊಳ್ಳುತ್ತಿರುವುದನ್ನು ನಾವು ಟಿವಿಯಲ್ಲಿ ನೋಡಿ ಕೈ ಕೈ ಹಿಸುಕಿಕೊಳ್ಳುತ್ತಿದ್ದೇವೆ. ಕನಿಷ್ಠ ಪಕ್ಷ ಈ ಅವಕಾಶವನ್ನಾದರೂ ಸದುಪಯೋಗ ಪಡಿಸಿಕೊಂಡು ಇಕ್ಬಾಲ್ ರ ಕನಸಿನ ಪಾಕಿಸ್ತಾನವನ್ನಾಗಿ ಮಾಡೋಣ. ಇದು ನ್ಯಾಯ ಮತ್ತು ನಿರ್ಭೀತ ಚುನಾವಣೆಯಿಂದ ಮಾತ್ರ ಸಾಧ್ಯ ಎಂದು ಶೆಹಬಾದ್ ಶರೀಫ್ ಹೇಳಿದ್ದಾರೆ.
ಇದೇ ವೇಳೆ ಭ್ರಷ್ಟಾಚಾರದ ಕುರಿತು ಮಾತನಾಡಿದ ಶೆಹಬಾಜ್ ಶರೀಫ್ ಭಾರತದಲ್ಲಿ ಭ್ರಷ್ಟಾಚಾರ ಆರೋಪ ಎದುರಿಸಿದ ಮಾಜಿ ಪ್ರಧಾನಿ ನರಸಿಂಹರಾವ್, ಮಾಜಿ ಸಿಎಂ ಜಯಲಲಿತಾ ಅವರಂತಹ ಘಟಾನುಘಟಿಗಳನ್ನೇ ಜೈಲಿಗೆ ಅಟ್ಟಿದ್ದರು. ಆದರೆ ನಮ್ಮ ದೇಶದಲ್ಲಿ ಪ್ರಜೆಗಳ ಸಾವಿರಾರು ಕೋಟಿ ರೂಗಳನ್ನು ಲೂಟಿ ಮಾಡಿದ ಜನರು ಬಹಿರಂಗವಾಗಿ ತಿರುಗಾಡುತ್ತಿರುವುದು ಮಾತ್ರವಲ್ಲದೇ ಇಂದು ಅಧಿಕಾರಕ್ಕಾಗಿ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದಾರೆ. ನಮ್ಮ ಆರ್ಥಿಕತೆ ದಿನದಿಂದ ದಿನಕ್ಕೆ ಕುಸಿಯುತ್ತಿದೆ. ಷೇರುಮಾರುಕಟ್ಟೆ ಸಾಧನೆ ಕಳಪೆಯಾಗಿದ್ದು. ನಮ್ಮ ದೇಶದ ಹೂಡಿಕೆದಾರರು ಲಂಡನ್ ಮತ್ತು ದುಬೈ ನತ್ತ ಪ್ರಯಾಣ ಬೆಳೆಸುತ್ತಿದ್ದಾರೆ. ಇಷ್ಟೇಲ್ಲಾ ಸಮಸ್ಯೆಗಳ ನಡುವೆ ದೇಶದ ಜನ ಜುಲೈ 25ರಂದು ಹೇಗೆ ಪ್ರತಿಕ್ರಿಯಿಸುತ್ತಾರೆ ಎಂಬುದು ನನ್ನಲ್ಲೂ ಕುತೂಹಲ ಮೂಡಿಸಿದೆ ಎಂದು ಶೆಹಬಾಜ್ ಶರೀಫ್ ಹೇಳಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos