ಸಿಂಗಾಪುರ ಪ್ರಧಾನಿ ಲೀ ಹೈನ್ ಲೂಂಗ್
ಸಿಂಗಾಪುರ: ಸಿಂಗಾಪುರ ಪ್ರಧಾನಿ ಲೀ ಹೈನ್ ಲೂಂಗ್ ಸೇರಿ ಸುಮಾರು 1.5 ಮಿಲಿಯನ್ ಸಿಂಗಾಪುರ ಪ್ರಜೆಗಳ ಆರೋಗ್ಯ ದಾಖಲೆಗಳಿಗೆ ಆನ್ ಲೈನ್ ಹ್ಯಾಕರ್ ಗಳು ಕನ್ನ ಹಾಕಿದ್ದಾರೆ.
ಇದು ಸಿಂಗಾಪುರದಲ್ಲಿ ಇದುವರೆಗೆ ನಡೆದ ದೊಡ್ಡ ಆನ್ ಲೈನ್ ವಂಚನೆ ಪ್ರಕರಣ ಎನ್ನುವುದಾಗಿ ಅಧಿಕಾರಿಗಳು ಹೇಳಿದ್ದು ಸಿಂಗಾಪುರದ ಅತಿದೊಡ್ಡ ಆಸ್ಪತ್ರೆ ಸಮೂಹ ಸಿಂಗ್ಹೆಲ್ತ್ನ ಕಂಪ್ಯೂಟರ್ ಗಳನ್ನು ಹ್ಯಾಕ್ ಮಾಡಿರುವ ಖದೀಮರು ರೋಗಿಗಳ ಆರೋಗ್ಯ ದಾಖಲೆ ಸೇರಿ ವೈಯುಕ್ತಿಕ ದಾಖಲೆಗಳನ್ನು ಕಳವು ಮಾಡಿದ್ದಾರೆ.
2015ರ ಮೇ 1 ರಿಂದ 2018ರ ಜುಲೈ 4 ರ ನಡುವಿನ ಅವಧಿಯ 1,60,000 ಹೊರರೋಗಿಗಳ ದಾಖಲೆಗಳಿಗೆ ಸಹ ಇವರು ಕನ್ನ ಹಾಕಿದ್ದಾರೆ. ಆದರೆ ಹ್ಯಾಕರ್ ಗಳು ಯಾವ ದಾಖಲೆಗಳನ್ನು ತಿರುಚಿಲ್ಲ, ಡಿಲೀಟ್ ಮಾಡಿಲ್ಲ ಎಲ್ಲಾ ವೈಯುಕ್ತಿಕ ಮಾಹಿತಿ, ದಾಖಲೆಗಳ ಕಾಪಿ ಮಾಡಲಾಗಿದೆ ಎಂದು ಸಿಂಗಾಪುರದ ಆರೋಗ್ಯ ಸಚಿವಾಲಯ ಹಾಗೂ ಮಾಹಿತಿ ಮತ್ತು ಸಂವಹನ ಸಚಿವಾಲಯ ಹೇಳಿದೆ.
"ದಾಲಿಕೋರರು ನಿರ್ದಿಷ್ಟವಾಗಿ ಪ್ರಧಾನಿ ಲೀ ಹೈನ್ ಲೂಂಗ್ ಅವ್ರ ದಾಖಲೆಗಳನ್ನು ವೈಯಕ್ತಿಕ ವಿವರಗಳನ್ನು ಗುರಿಯಾಗಿರಿಸಿಕೊಂಡಿದ್ದರು ಎಂದು ಆರೋಗ್ಯ ಸಚಿವ ಗ್ಯಾನ್ ಕಿಮ್ ಯಾಂಗ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಜೂನ್ 27 ರಿಂದ ಜುಲೈ 4 ರ ನಡುವೆ ದುಷ್ಕರ್ಮಿಗಳು ಈ ಕೃತ್ಯ ನಡೆಸಿದ್ದಾರೆ. ಅವರು ಕ್ಯಾನ್ಸರ್ ರೋಗಿಗಳ ಮಾಹಿತಿಯನ್ನು ಕದ್ದಿದ್ದಲ್ಲದೆ ರೋಗಿಗಳ ಹೆಸರು, ರಾಷ್ಟ್ರೀಯ ನೋಂದಣಿ ಗುರುತಿನ ಚೀಟಿ ಸಂಖ್ಯೆ ಸೇರಿ ಅನೇಕ ಮಾಹಿತಿಯನ್ನು ಕಳವು ಮಾಡಿದ್ದಾರೆ. ನಾವು ಮುಂದಿನ ದಿನಗಳಲ್ಲಿ ಐಟಿ ಸುರಕ್ಷತೆ ಕ್ರಮಗಳನ್ನು ಇನ್ನಷ್ಟು ಹೆಚ್ಚಿಸುತ್ತೇವೆ. ಆ ಮೂಲಕ ಭವಿಷ್ಯದಲ್ಲಿ ಇಂತಹಾ ದಾಳಿ ಮರುಕಳಿಸದಂತೆ ಎಚ್ಚರ ವಹಿಸಲಾಗುತ್ತದೆ ಎಂದು ಅಧಿಕಾರಿಗಳು ಹೇಳಿಕೆ ನೀಡಿದ್ದಾರೆ.