ಈಶ್ವರ್ ಶರ್ಮಾ ಹಾಗೂ ಅವರ ತಂದೆ ವಿಶ್ವನಾಥ್ ಶರ್ಮಾ
ಲಂಡನ್: 8 ವರ್ಷದ ಯೋಗ ಚಾಂಪಿಯನ್, ಮೈಸೂರು ಮೂಲದ ಈಶ್ವರ್ ಶರ್ಮಾ ಎಂಬ ವಿದ್ಯಾರ್ಥಿಯನ್ನು ಬ್ರಿಟಿಷ್ ಇಂಡಿಯನ್ ವರ್ಷದ ವ್ಯಕ್ತಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಕಳೆದ ಜೂನ್ ನಲ್ಲಿ ಕೆನಡಾದ ವಿನ್ನಿಪೆಂಗ್ ನಲ್ಲಿ ನಡೆದ ವಿಶ್ವ ವಿದ್ಯಾರ್ಥಿ ಕ್ರೀಡಾ ಸ್ಪರ್ಧೆಯಲ್ಲಿ ಬ್ರಿಟನ್ ಪ್ರತಿನಿಧಿಸಿದ್ದ ಈಶ್ವರ್ ಶರ್ಮಾ, ಕಲಾತ್ಮಕ ಮತ್ತು ವೈಯಕ್ತಿಕ ವಿಭಾಗದಲ್ಲಿ ಚಿನ್ನ ಗೆಲ್ಲುವ ಮೂಲಕ ಚಾಂಪಿಯನ್ ಆಗಿ ಹೊರ ಹೊಮ್ಮಿದ್ದರು. ಈ ಸಾಧನೆಯನ್ನು ಗುರುತಿಸಿ ಯುವ ಸಾಧಕರ ವಿಭಾಗದಲ್ಲಿ ವರ್ಷದ ವ್ಯಕ್ಕಿಯಾಗಿ ಆಯ್ಕೆ ಮಾಡಲಾಗಿದೆ.
ಬಿರ್ಮಿಂಗ್ ಹ್ಯಾಮ್ ನಲ್ಲಿ ಇತ್ತೀಚಿಗೆ ನಡೆದ ಆರನೇ ವಾರ್ಷಿಕ ಪ್ರಶಸ್ತಿ ಸಮಾರಂಭದಲ್ಲಿ ಈಶ್ವರ್ ಶರ್ಮಾಗೆ ವರ್ಷದ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ಕೆಂಟ್ ನ ಸೇಂಟ್ ಮೈಕೆಲ್ ಶಾಲೆ ವಿದ್ಯಾರ್ಥಿಯಾಗಿರುವ ಈಶ್ವರ್ ಶರ್ಮಾ, 11 ವರ್ಷದೊಳಿಗಿನ ಬ್ರಿಟನ್ ರಾಷ್ಟ್ರೀಯ ಯೋಗ ಚಾಂಪಿಯನ್ ಆಗಿದ್ದು, ನಾನು ಯೋಗ ವಿದ್ಯಾರ್ಥಿಯಾಗಿರಲು ಬಯಸುತ್ತೇನೆ ಎಂದಿದ್ದಾರೆ.
ನಾನು ಬೇರೆಯವರ ಜೊತೆ ಸ್ಪರ್ಧಿಸುವ ಬದಲು ನನ್ನೊಟ್ಟಿಗೆ ನಾನು ಸ್ಪರ್ಧಿಸುತ್ತೇನೆ. ಈ ಕಾರಣದಿಂದ ಅತ್ಯಂತ ಕಠಿಣ ಭಂಗಿಗಳನ್ನು ಅಭ್ಯಾಸ ಮಾಡಲು ಸಾಧ್ಯವಾಗುತ್ತಿದೆ ಎಂದು ಈಶ್ವರ್ ತಿಳಿಸಿದ್ದಾರೆ.
ಇನ್ನು ತಮ್ಮ ಮಗನ ಸಾಧನೆ ಬಗ್ಗೆ ತಮಗೆ ಹೆಮ್ಮೆ ಇದೆ ಮತ್ತು ಅವನು ಇತರ ವಿದ್ಯಾರ್ಥಿಗಳಿಗೆ ಸ್ಫೂರ್ತಿಯಾಗಬೇಕು ಎಂದು ಅವರ ತಂದೆ ವಿಶ್ವನಾಥ್ ಶರ್ಮಾ ಅವರು ಹೇಳಿದ್ದಾರೆ.