ವಿದೇಶ

ಮೆಹುಲ್ ಚೋಕ್ಸಿ ವಿರುದ್ಧ ಪ್ರಕರಣಗಳು ದಾಖಲಾಗಿದ್ದರೆ ನಾಗರೀಕತ್ವ ರದ್ದು ಮಾಡಲಾಗುತ್ತದೆ: ಆ್ಯಂಟಿಗುವಾ ಸಚಿವ

Srinivasamurthy VN
ನವದೆಹಲಿ: ಪಂಜಾಬ್ ನ್ಯಾಷನಲ್ ಬ್ಯಾಂಕ್ ವಂಚನೆ ಪ್ರಕರಣದ ಪ್ರಮುಖ ಆರೋಪಿ ಮೆಹುಲ್ ಚೋಕ್ಸಿಗೆ ಆ್ಯಂಟಿಗುವಾ ಸರ್ಕಾರ ಮತ್ತೊಂದು ಶಾಕ್ ನೀಡಿದ್ದು, ಚೋಕ್ಸಿ ವಿರುದ್ಧ ಪ್ರಕರಣಗಳು ದಾಖಲಾಗಿರುವ ಕುರಿತು ತಮಗೆ ಮಾಹಿತಿ ಲಭಿಸಿದರೆ ಅವರ ನಾಗರೀಕತ್ವವನ್ನು ರದ್ದು ಮಾಡಲಾಗುತ್ತದೆ ಎಂದು ಹೇಳಿದೆ.
ಈ ಬಗ್ಗೆ ಮಾತನಾಡಿರುವ ಆ್ಯಂಟಿಗುವಾ ಸಚಿವ ಇಪಿ ಚೆಟ್ ಗ್ರೀನೆ, ಮೆಹುಲ್ ಚೋಕ್ಸಿ ಅವರ ನಾಗರೀಕತ್ವದ ಅರ್ಜಿಯನ್ನು ಸ್ವೀಕರಿಸಲಾಗಿದೆ. ಆದರೆ ಈವರೆಗೂ ಅವರಿಗೆ ನಾಗರಿಕತ್ವ  ನೀಡಿಲ್ಲ, ಒಂದೊಮ್ಮೆ ಅವರ ವಿರುದ್ಧ ಪ್ರಕರಣಗಳು ದಾಖಲಾಗಿವೆ ಎಂದು ತಮಗೆ ಮಾಹಿತಿ ಲಭ್ಯವಾದರೆ ಆಗ ಅವರ ಅರ್ಜಿಯನ್ನು ರದ್ದು ಮಾಡುತ್ತೇವೆ ಎಂದು ತಿಳಿಸಿದ್ದಾರೆ.
'ನಾವು ಭಾರತ ಸರ್ಕಾರದೊಂದಿಗೆ ಉತ್ತಮ ಸೌಹಾರ್ಧ ಸಂಬಂಧ ಮುಂದುವರೆಸಲು ಬಯಸುತ್ತೇವೆ. ಭಾರತ ಅಥವಾ ಆ್ಯಂಟಿಗುವಾದ ಹಿತಾಸಕ್ತಿಗೆ ಧಕ್ಕೆಯಾಗುವ ಯಾವುದೇ ಪರಿಸ್ಥಿತಿ ತಲೆದೋರಲು ನಾವು ಅವಕಾಶ ನೀಡುವುದಿಲ್ಲ. ಸಿಟಿಜನ್ ಇನ್ವೆಸ್ಟ್ ಮೆಂಟ್ ಕಾರ್ಯಕ್ರಮದ ಮೂಲಕ  ದೇಶದಲ್ಲಿ ಬಂಡವಾಳ ಹೂಡಲು ಅವಕಾಶ ನೀಡಲಾಗಿತ್ತು. ದೇಶದಲ್ಲಿ ಸುಮಾರು ಜಾಗತಿಕ ಹೂಡಿಕೆದಾರರಿಂದ 2 ಬಿಲಿಯನ್ ಡಾಲರ್ ಹಣ ಹೂಡಿಕೆಗೆ ಯೋಜನೆ ರೂಪಿಸಲಾಗಿದೆ. ಆದರೆ ಇದರಿಂದ ಒಂದು ದೇಶದ ಹಿತಾಸಕ್ತಿಗೆ ಧಕ್ಕೆ ತರಲು ನಾವು ಇಚ್ಛಿಸುವುದಿಲ್ಲ. 
ಚೋಕ್ಸಿ ನಾಗರಿಕತ್ವ ಅರ್ಜಿಗೆ ನಾವು ಇನ್ನೂ ಅನುಮೋದನೆ ನೀಡಿಲ್ಲ.  ಅಂತೆಯೇ ಅವರ ವಿರುದ್ಧದ ಪ್ರಕರಣಗಳು ದಾಖಲಾಗಿರುವ ಬಗ್ಗೆ ಮಾಹಿತಿ ದೊರೆತರೆ ಅರ್ಜಿಯನ್ನೂ ಕೂಡ ತಿರಸ್ಕರಿಸಲಾಗುತ್ತದೆ ಎಂದು ಗ್ರೀನೆ ಹೇಳಿದ್ದಾರೆ.
ಇತ್ತೀಚೆಗಷ್ಟೇ ಮಾಧ್ಯಮ ಪ್ರಕಟಣೆ ನೀಡಿದ್ದ ಉದ್ಯಮಿ ಮೆಹುಲ್ ಚೋಕ್ಸಿ ತಾವು ತಲೆ ಮರೆಸಿಕೊಳ್ಳಲು ಅಲ್ಲ, ವ್ಯಾಪಾರ ವಿಸ್ತರಣೆ ಮಾಡಲು ಆ್ಯಂಟಿಗುವಾ ನಾಗರಿಕತ್ವಕ್ಕೆ ಅರ್ಜಿ ಸಲ್ಲಿಸಿದ್ದೇನೆ ಎಂದು ಹೇಳಿದ್ದರು.
SCROLL FOR NEXT