ನ್ಯೂಯಾರ್ಕ್: ಡೊನಾಲ್ಡ್ ಟ್ರಂಪ್ ಅವರೇ ಅಮೆರಿಕದ ಅಧ್ಯಕ್ಷರಾಗಿರುವಾಗ ಬಾಬಾ ರಾಮ್ ದೇವ್ ಕೂಡ ಭವಿಷ್ಯದಲ್ಲಿ ಭಾರತದ ಪ್ರಧಾನಿಯಾಗಬಹುದು ಎಂದು ಅಮೆರಿಕದ ಪ್ರತಿಷ್ಟಿತ ಪತ್ರಿಕೆ ನ್ಯೂಯಾರ್ಕ್ ಟೈಮ್ಸ್ ಹೇಳಿದೆ.
ನ್ಯೂಯಾರ್ಕ್ ಟೈಮ್ಸ್ ಈ ಬಗ್ಗೆ ವರದಿಯೊಂದನ್ನು ಪ್ರಕಟಿಸಿದ್ದು, ಇದರಲ್ಲಿ ಯೋಗಗುರು ಬಾಬಾ ರಾಮ್ ದೇವ್ ರನ್ನು ಭಾರತದ ಭವಿಷ್ಯದ ಪ್ರಧಾನಿ ಎಂದು ನುಡಿಚಿತ್ರವೊಂದರಲ್ಲಿ ಬರೆಯಲಾಗಿದೆ. ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರನ್ನು ಬಾಬಾ ರಾಮ್ ದೇವ್ ಗೆ ಹೋಲಿಕೆ ಮಾಡಿದ್ದು, ಡೊನಾಲ್ಡ್ ಟ್ರಂಪ್ ಅಮೆರಿಕಾದ ಪ್ರಧಾನಿಯಾದಂತೆ ಭಾರತದ ಭವಿಷ್ಯದ ಪ್ರಧಾನಿಯಾಗುವ ಎಲ್ಲಾ ಅರ್ಹತೆಯೂ ಬಾಬಾ ರಾಮ್ ದೇವ್ ಗೆ ಇದೆ ಎಂದು ವ್ಯಂಗ್ಯ ರೂಪದಲ್ಲಿ ಪ್ರಕಟ ಮಾಡಿದೆ.
ಅಮೆರಿಕದಾದ್ಯಂತ ಡೊನಾಲ್ಡ್ ಟ್ರಂಪ್ ತಮ್ಮ ವ್ಯವಹಾರ ಸಾಮ್ರಾಜ್ಯವನ್ನು ಹೇಗೆ ವಿಸ್ತರಿಸಿದ್ದಾರೆಯೋ ಅದೇ ರೀತಿಯಲ್ಲಿ ಬಾಬಾ ರಾಮ್ ದೇವ್ ಕೂಡಾ ಭಾರತದಲ್ಲಿ ತಮ್ಮ ವ್ಯವಹಾರವನ್ನು ವಿಸ್ತರಿಸಿದ್ದಾರೆ. ತಮ್ಮ ಪತಂಜಲಿ ಕಂಪೆನಿಯನ್ನು ಭಾರತದ ಮೂಲೆಗಳಿಗೂ ತಲುಪಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯ ಯಶಸ್ಸಿನ ಹಿಂದೆಯೂ ಬಾಬಾ ರಾಮ್ ದೇವ್ ಇದ್ದಾರೆ. ಬಿಜೆಪಿಯೊಂದಿಗೆ ಉತ್ತಮ ಸಂಬಂಧ ಹೊಂದಿದ್ದಾರೆ. ಈ ಕಾರಣದಿಂದಲೇ ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ರಾಮ್ ದೇವ್ ರ ಸಾಮ್ರಾಜ್ಯವನ್ನು ಸಂಪೂರ್ಣ ವಿಸ್ತರಿಸಲಾಗಿದೆ ಎಂದು ನ್ಯೂಯಾರ್ಕ್ ಟೈಮ್ಸ್ ಪರೋಕ್ಷವಾಗ ಹೇಳಿದೆ.