ಕ್ಸಿ ಜಿನ್ ಪಿಂಗ್ - ಪ್ರಧಾನಿ ಮೋದಿ
ಕಿಂಗ್ಡಾವೋ: ಎಂಟು ದೇಶಗಳ ಶಾಂಘೈ ಸಹಕಾರ ಸಂಘಟನೆಯ 18ನೇ ಶೃಂಗಸಭೆಯಲ್ಲಿ ಭಾರತವೊಂದೇ ಮಹತ್ವಾಕಾಂಕ್ಷಿಯ ಒನ್ ಬೆಲ್ಟ್ ಮತ್ತು ಒನ್ ರೋಡ್ ಯೋಜನೆಯ ಭಾನುವಾರ ವಿರೋಧ ವ್ಯಕ್ತಪಡಿಸಿದೆ.
ಎರಡು ದಿನಗಳ ಶಾಂಘೈ ಶೃಂಗಸಭೆ ಇಂದು ಅಂತ್ಯಗೊಂಡಿದ್ದು, ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಎಂಟು ಸದಸ್ಯ ರಾಷ್ಟ್ರಗಳು ಘೋಷಣೆಗೆ ಸಹಿ ಹಾಕಿವೆ. ರಷ್ಯಾ, ಪಾಕಿಸ್ತಾನ, ಕಝಕಿಸ್ತಾನ್, ಉಜ್ಭೇಕಿಸ್ತಾನ್, ಕಿರಿಗಿಸ್ತಾನ್ ಮತ್ತು ತಜಕಿಸ್ತಾನ್ ವಿಶ್ವದ 60ಕ್ಕಿಂತಲೂ ಹೆಚ್ಚು ರಾಷ್ಟ್ರಗಳ ಜತೆ ವ್ಯಾಪಾರ ಮತ್ತು ಸಾರಿಗೆ ಸಂಬಂಧ ಸ್ಥಾಪಿಸುವುದಕ್ಕಾಗಿ ಚೀನಾ ಸಂಕಲ್ಪ ಮಾಡಿರುವ ಒನ್ ಬೆಲ್ಟ್ ಮತ್ತು ಒನ್ ರೋಡ್ ಯೋಜನೆಗೆ ಬೆಂಬಲ ಸೂಚಿಸಿವೆ.
ಚೀನಾಗೆ ಬೆಂಬಲ ನೀಡಲು ನಿರಾಕರಿಸಿದ ಪ್ರಧಾನಿ ಮೋದಿ, ಯಾವುದೇ ಅತಿ ದೊಡ್ಡ ಸಂಪರ್ಕ ಯೋಜನೆಯು ದೇಶಗಳ ಸಾರ್ವಭೌಮತ್ವ ಮತ್ತು ಪ್ರಾದೇಶಿಕ ಸಮಗ್ರತೆಯನ್ನು ಗೌರವಿಸಬೇಕು ಎಂದು ಪ್ರತಿಪಾದಿಸಿದ್ದಾರೆ.
ನೆರೆಯ ರಾಷ್ಟ್ರಗಳೊಂದಿಗೆ ಸಂಪರ್ಕ ಸಾಧಿಸುವುದು ಭಾರತದ ಪ್ರಮುಖ ಆದ್ಯತೆಯಾಗಿದ್ದು, ನಮ್ಮ ದೇಶದ ಸಾರ್ವಭೌಮತ್ವ ಮತ್ತು ಪ್ರಾದೇಶಿಕ ಸಮಗ್ರತೆಯನ್ನು ಗೌರವಿಸುವಂತಿದ್ದರೆ ಭಾರತ ಖಂಡಿತ ಚೀನಾದ ಒನ್ ಬೆಲ್ಟ್ ಒನ್ ರೋಡ್ ಯೋಜನೆಗೆ ಬೆಂಬಲ ನೀಡಲಿದೆ ಎಂದು ಮೋದಿ ಹೇಳಿದ್ದಾರೆ.
ಏಷ್ಯಾ ಮತ್ತು ಸುತ್ತಮುತ್ತಲಿನ ರಾಷ್ಟ್ರಗಳನ್ನು ಚೀನಾದೊಂದಿಗೆ ಸಂಪರ್ಕಿಸುವ ಈ ಯೋಜನೆಯ ಕಾಮಗಾರಿಗೆ ಚೀನಾ ಅಧ್ಯಕ್ಷ ಕ್ಸಿ- ಜಿನ್ ಪಿಂಗ್ ಶಂಕುಸ್ಥಾಪನೆ ನೆರವೇರಿಸಿದ್ದರು.
ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಸುಮಾರು 57 ಬಿಲಿಯನ್ ಅಮೆರಿಕನ್ ಡಾಲರ್ ವೆಚ್ಚದ ಚೀನಾ- ಪಾಕಿಸ್ತಾನ ಆರ್ಥಿಕ ಕಾರಿಡಾರ್ ಸಾಗುವುದರಿಂದ ಭಾರತ ಉದ್ದೇಶಿತ ಒಪ್ಪಂದಕ್ಕೆ ಸಹಿ ಹಾಕಿಲ್ಲ.