ವಿದೇಶ

ಟ್ರಂಪ್-ಕಿಮ್ ಐತಿಹಾಸಿಕ ಭೇಟಿ: ಸಿಂಗಾಪುರಕ್ಕೆ ಆಗಮಿಸಿದ ಅಮೆರಿಕ ಅಧ್ಯಕ್ಷ

Lingaraj Badiger
ಸಿಂಗಾಪುರ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಭಾನುವಾರ ಸಿಂಗಾಪುರಕ್ಕೆ ಆಗಮಿಸಿದ್ದು,  ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ರೊಂದಿಗೆ ಜೂನ್ 12ರಂದು ನಡೆಯುವ ಐತಿಹಾಸಿಕ ಶೃಂಗಸಭೆಗೆ ವೇದಿಕೆ ಸಜ್ಜಾಗಿದೆ.
ಟ್ರಂಪ್ ಅವರು ತಮ್ಮ ಏರ್ ಫೋರ್ಸ್ ಒನ್ ವಿಮಾನದ ಮೂಲಕ ಇಂದು ಸಿಂಗಾಪುರದ ಪಯ ಲೇಬರ್ ವಾಯುನೆಲೆಗೆ ಆಗಮಿಸಿದ್ದು, ದಕ್ಷಿಣ ಕೊರಿಯಾ ಜತೆಗಿನ ಶೀತಲ ಸಮರ ಕೊನೆಗೊಳಿಸುವಿಕೆ ಮತ್ತು ಅಣ್ವಸ್ತ್ರ ತ್ಯಜಿಸುವ ಕುರಿತಂತೆ ಉಭಯ ನಾಯಕರು ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆ ಇದೆ.
ಸಿಂಗಾಪುರಕ್ಕೆ ಟ್ರಂಪ್ ಆಗಮಿಸುವ ಮುನ್ನ ಉತ್ತರ ಕೊರಿಯಾ ಅಧ್ಯಕ್ಷ ಕಿಮ್ ಜಾಂಗ್ ಉನ್ ಆಗಮಿಸಿದ್ದು, ಮಂಗಳವಾರ ಉಭಯ ನಾಯಕರು ಮುಖಾಮುಖಿಯಾಗಲಿದ್ದಾರೆ.
ಟ್ರಂಪ್ ಹಾಗೂ ಕಿಮ್ ಮಾತುಕತೆ ಮತ್ತು ನಂತರದ ಫಲಶ್ರುತಿ ಬಗ್ಗೆ ಜಗತಿನ್ಯಾದ್ಯಂತ ತೀವ್ರ ಕುತೂಹಲ ಕೆರಳಿಸಿದ್ದು, ಅಮೆರಿಕ ಮತ್ತು ಉತ್ತರ ಕೊರಿಯಾ ನಡುವಣ 65 ವರ್ಷಗಳ ಹಗೆತನ ಇದರೊಂದಿಗೆ ಶಮನವಾಗಲಿದೆಯೇ ಎಂಬುದು ಕಾದು ನೋಡಬೇಕಿದೆ.
ಮಾರಕ ಅಣ್ವಸ್ತ್ರಗಳು ಹಾಗೂ ವಿನಾಶಕಾರಿ ಕ್ಷಿಪಣಿಗಳನ್ನು ಪ್ರಯೋಗಿಸುತ್ತಾ ಏಷ್ಯಾ ಸೇರಿದಂತೆ ವಿಶ್ವದಲ್ಲಿ ಆತಂಕದ ವಾತಾವರಣ ಸೃಷ್ಟಿಸಿದ್ದ ಉತ್ತರ ಕೊರಿಯಾ ಹಾಗೂ ಇದೇ ಕಾರಣಕ್ಕಾಗಿ ಕಿಮ್ ವಿರುದ್ಧ ನಿರಂತರ ವಾಗ್ದಾಳಿ ನಡೆಸುತ್ತಾ ಯುದ್ಧ ಸಾಧ್ಯತೆ ವಾತಾವರಣ ನಿರ್ಮಿಸಿದ್ದ ಅಮೆರಿಕ ಈಗ ಶಾಂತಿ ಮಾತುಕತೆಗೆ ಮುನ್ನುಡಿ ಬರೆಯುತ್ತಿರುವುದು ಮಹತ್ವದ ಬೆಳವಣಿಗೆಯಾಗಿದೆ.
ಉತ್ತರ ಕೊರಿಯಾ ಸಂಪೂರ್ಣ ಅಣ್ವಸ್ತ್ರ ನಿಶಸ್ತ್ರೀಕರಣ ಮಾಡಬೇಕೆಂದು ಅಮೆರಿಕ ಒತ್ತಾಯಿಸುತ್ತಿದೆ. ಆದರೆ ಕಿಮ್ ಜಾಂಗ್ ಉನ್ ಅದಕ್ಕೆ ಪೂರ್ಣವಾಗಿ ಒಪ್ಪಿಗೆ ನೀಡುವ ಸಾಧ್ಯತೆಯಿಲ್ಲ ಎನ್ನಲಾಗಿದೆ.
SCROLL FOR NEXT