ಸಿಂಗಾಪುರದಲ್ಲಿ ಉನ್-ಟ್ರಂಪ್ ಐತಿಹಾಸಿಕ ಭೇಟಿ
ಸಿಂಗಾಪುರ: ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ರೊಂದಿಗಿನ ಭೇಟಿ ಅದ್ಬುತ ಯಶಸ್ಸು ನೀಡುವ ವಿಶ್ವಾಸವಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ಸಿಂಗಾಪುರದ ಸೆಂಟೋಸಾ ದ್ವೀಪದಲ್ಲಿರುವ ಕ್ಯಾಪೆಲ್ಲಾ ಹೋಟೆಲ್ನಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಉತ್ತರ ಕೊರಿಯಾ ಅಧ್ಯಕ್ಷ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಮುಖಾಮುಖಿಯಾಗಿ ಚರ್ಚೆ ನಡೆಸಿದ್ದಾರೆ. ಚರ್ಚೆ ಕುರಿತಂತೆ ಇಂದು ಮಾಧ್ಯಮಗಳಿಗೆ ಮಾಹಿತಿ ನೀಡಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು, ಕಿಮ್ ಜಾಂಗ್ ಉನ್ ರೊಂದಿಗಿನ ಐತಿಹಾಸಿಕ ಭೇಟಿ ಅದ್ಬುತ ಯಶಸ್ಸು ಸಾಧಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಇದೇ ವೇಳೆ ಇಡೀ ಭೇಟಿಯ ಪ್ರಮುಖ ಅಂಶ ಉತ್ತರ ಕೊರಿಯಾದ ಅಣ್ವಸ್ತ್ರ ಯೋಜನೆ ಕೈಬಿಡುವ ಕುರಿತು ಮಾರ್ಮಿಕವಾಗಿ ಮಾತನಾಡಿದ ಟ್ರಂಪ್, ಒಗ್ಗೂಡಿ ಕೆಲಸ ಮಾಡಲಿದ್ದು ಆ ಬಗ್ಗೆ ಎಚ್ಚರ ವಹಿಸುತ್ತೇವೆ ಎಂದು ಹೇಳುವ ಮೂಲಕ ಕಿಮ್ ಜಾಂಗ್ ಉನ್ ರೊಂದಿಗೆ ಅಣ್ವಸ್ತ್ರ ಯೋಜನೆ ಕೈ ಬಿಡುವ ಕುರಿತು ಪ್ರಸ್ತಾಪಿಸುವುದಾಗಿ ಪರೋಕ್ಷವಾಗಿ ಹೇಳಿದ್ದಾರೆ.
ಅಭೂತಪೂರ್ವ ಭದ್ರತೆಯ ನಡುವೆ ಕ್ಯಾಪೆಲ್ಲಾ ಹೋಟೆಲ್ ನಲ್ಲಿ ಟ್ರಂಪ್ ಮತ್ತು ಉನ್ ಮುಖಾಮುಖಿ ಭೇಟಿಯಾಗಿದ್ದು, ಸುಮಾರು 45 ನಿಮಿಷಗಳ ಕಾಲ ಉಭಯ ನಾಯಕರು ಚರ್ಚೆ ನಡೆಸಿದ್ದಾರೆ. ಈ ವೇಳೆ ಉಭಯ ದೇಶಗಳ ನಡುವೆ ಕಗ್ಗಂಟಾಗಿ ಉಳಿದುಕೊಂಡಿರುವ ಅಣ್ವಸ್ತ್ರ ಯೋಜನೆ ಬಿಕ್ಕಟ್ಟು, ದಕ್ಷಿಣ ಕೊರಿಯಾದೊಂದಿಗಿನ ಗಡಿ ಸಮಸ್ಯೆ ಮುಂತಾದ ವಿಚಾರಗಳ ಕುರಿತು ಉಭಯ ನಾಯಕರು ಚರ್ಚೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.