ವಿದೇಶ

ಅಣ್ವಸ್ತ್ರ ನಿಶ್ಯಸ್ತ್ರೀಕರಣದ ಕುರಿತು ಕಿಮ್ ಜಾಂಗ್ ಉನ್ ಮಾತು ನೀಡಿದ್ದಾರೆ: ಡೊನಾಲ್ಡ್ ಟ್ರಂಪ್

Srinivasamurthy VN
ಸಿಂಗಾಪುರ: ಅಣ್ವಸ್ತ್ರ ನಿಶ್ಯಸ್ತ್ರೀಕರಣದ ಕುರಿತು ಭರವಸೆ ನೀಡಿರುವ ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಮಾತಿನ ಮೇಲೆ ನನಗೆ ಸಂಪೂರ್ಣ ವಿಶ್ವಾಸವಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ನಿನ್ನೆ ಸಿಂಗಾಪುರದ ಸೆಂಟೋಸಾ ದ್ವೀಪದಲ್ಲಿರುವ ಕ್ಯಾಪೆಲ್ಲಾ ಹೋಟೆಲ್​ನಲ್ಲಿ ನಿನ್ನೆ ನಡೆದ ಐತಿಹಾಸಿಕ ಭೇಟಿ ಬಳಿಕ ಇದೇ ಮೊದಲ ಬಾರಿಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಉಭಯ ದೇಶಗಳ ನಡುವಿನ ಒಪ್ಪಂದಕ್ಕೆ ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಖಂಡಿತಾ ಗೌರವ ನೀಡಲಿದ್ದು, ಅಣ್ವಸ್ತ್ರ ನಿಶ್ಯಸ್ತ್ರೀಕರಣದ ಕುರಿತ ತಮ್ಮ ಮಾತನ್ನು ಉಳಿಸಿಕೊಳ್ಳಲ್ಲಿದ್ದಾರೆ ಎಂದು ಹೇಳಿದರು.
ಅಂತೆಯೇ ನಮ್ಮ ಈ ಭೇಟಿ ಭವಿಷ್ಯದ ಐತಿಹಾಸಿಕ ಕ್ಷಣಗಳಿಗೆ ಸಾಕ್ಷಿಯಾಗಲಿದೆ. ಹೊಸ ಅಧ್ಯಾಯದ ಮುನ್ನುಡಿ ಬರೆಯಲಿದ್ದು, ಕೊರಿಯಾ ಪರ್ಯಾಯ ದ್ವೀಪದಲ್ಲಿ ಸಂಪೂರ್ಣ ಅಣ್ವಸ್ತ್ಪ ನಿಶ್ಯಸ್ತ್ರಿಕರಣಗೊಳ್ಳಲ್ಲಿದ್ದು, ಶಾಂತಿ ಸ್ಥಾಪನೆಯಾಗಲಿದೆ. ಇದಕ್ಕಾಗಿ ಅಮೆರಿಕ ಮತ್ತು ಉತ್ತರ ಕೊರಿಯಾ ಖಂಡಿತಾ ಒಗ್ಗೂಡಿ ಕೆಲಸ ಮಾಡಲಿದೆ. ಸಿಂಗಾಪುರ ಶೃಂಗಸಭೆ ಹೊಸ ಏಷ್ಯಾ-ಫೆಸಿಫಿಕ್ ಬೌಗೋಳಿಕ ಪ್ರದೇಶದಲ್ಲಿನ ಆತಂಕಗಳಿಗೆ ಪುಲ್ ಸ್ಟಾಪ್ ಹಾಕುವ ಕಾರ್ಯಕ್ಕೆ ಚಾಲನೆ ನೀಡಿದೆ ಎಂದು ಬಣ್ಣಿಸಿದರು.
ನಿಜ ಹೇಳಬೇಕು ಎಂದರೆ 90 ದಿನಗಳ ಹಿಂದಿನಿಂದಲೇ ಕಿಮ್ ಜಾಂಗ್ ಉನ್ ರೊಂದಿಗೆ ಸಂಪರ್ಕದಲ್ಲಿದ್ದೆ. ಈ ಸಮಯಕ್ಕಾಗಿ ಉಭಯ ದೇಶಗಳು ಕಾಯುತ್ತಿದ್ದವು. ಅಣ್ವಸ್ತ್ರ ನಿಶ್ಯಸ್ತ್ರೀಕರಣಕ್ಕೆ ಇದು ನನಗೆ ಸಿಕ್ಕ ಮೊದಲ ಅಮೂಲ್ಯ ಅವಕಾಶವಾಗಿತ್ತು. ಇದನ್ನು ನಾನು ಸದ್ವಿನಿಯೋಗ ಮಾಡಿಕೊಂಡಿದ್ದೇನೆ ಎನಿಸುತ್ತಿದೆ. ನಾನು ಕಿಮ್ ಜಾಂಗ್ ಉನ್ ರಲ್ಲಿ ಅಣ್ವಸ್ತ್ರ ನಿಶ್ಯಸ್ತ್ರೀಕರಣ ಸಾಧ್ಯವೇ ಎಂದು ಕೇಳಿದೆ. ಆಗ ಉನ್ ನಾವಿಬ್ಬರೂ ಸೇರಿ ಮಾಡೋಣ ಎಂದು ಉತ್ತರಿಸಿದರು. ಅವರ ಉತ್ತರ ನಿಜಕ್ಕೂ ನನಗೆ ಸಮಾಧಾನ ತಂದಿತು. ಈ ಬಗ್ಗೆ ನಾವಿಬ್ಬರೂ ಗಂಭೀರ ಹೆಜ್ಜೆ ಇಟ್ಟಿದ್ದು, ಇದರಲ್ಲಿ ಯಾವುದೇ ರೀತಿಯ ಅನುಮಾನ ಬೇಡ. ನಾನು ಕಿಮ್ ಜಾಂಗ್ ಉನ್ ರ ಮೇಲೆ ಭರವಸೆ ಇಟ್ಟಿದ್ದೇನೆ ಎಂದು ಟ್ರಂಪ್ ಹೇಳಿದರು.
ನಿನ್ನೆ ಸಿಂಗಾಪುರದಲ್ಲಿ ನಡೆದ ಐತಿಹಾಸಿಕ ಶೃಂಗಸಭೆಯಲ್ಲಿ ಪಾಲ್ಗೊಂಡಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ಉತ್ತರ ಕೊರಿಯಾ ಅಧ್ಯಕ್ಷ ಕಿಮ್ ಜಾಂಗ್ ಉನ್ ಅಣ್ವಸ್ತ್ರ ನಿಶ್ಯಸ್ತ್ರೀಕರಣ ಒಪ್ಪಂದವೂ ಸೇರಿದಂತೆ ಪ್ರಮುಖ ನಾಲ್ಕು ಒಪ್ಪಂದಗಳಿಗೆ ಸಹಿ ಹಾಕಿದ್ದರು.
SCROLL FOR NEXT