ವಿದೇಶ

ಬಂಧನ ಕೇಂದ್ರಕ್ಕೆ ಕಮಲಾ ಹ್ಯಾರಿಸ್ ಭೇಟಿ: ಟ್ರಂಪ್ ಆಡಳಿತದಿಂದ ಮಾನವೀಯತೆ ವಿರುದ್ಧ ಅಪರಾಧ ಆರೋಪ

Nagaraja AB

ಕ್ಯಾಲಿಪೋರ್ನಿಯಾ: ಅಮೆರಿಕಾದಲ್ಲಿ ವಲಸಿಗರ ವಿವಾದ ತೀವ್ರಗೊಂಡಿರುವ ಬೆನ್ನಲ್ಲೇ,  ಭಾರತೀಯ ಮೂಲದ ಸೆನೆಟರ್ ಕಮಲಾ ಹ್ಯಾರಿಸ್ ಇಲ್ಲಿನ ಬಂಧನ ಕೇಂದ್ರದಲ್ಲಿರುವ   ಮಕ್ಕಳಿಂದ ಬೇರ್ಪಡಿಸಿದ್ದ ತಾಯಂದಿರನ್ನು ಭೇಟಿಯಾಗಿದ್ದು, ಟ್ರಂಪ್ ಆಡಳಿತ ಮಾನವೀಯತೆ ವಿರುದ್ಧದ ಅಪರಾಧ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.

ಸ್ಯಾನಿಡಿಯಾಗೊ ಬಳಿಯ ಒಟಯ್ ಮೆಸಾ ಬಂಧನ ಕೇಂದ್ರದಲ್ಲಿರುವ ಮೂಲ ಸೌಕರ್ಯ ಪರಿಶೀಲಿಸಿ, ಖೈದಿ ಸ್ವರೂಪದ ಬಂಧನದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಕೂಡಲೇ  ಬೇರ್ಪಡಿಸಲಾಗಿರುವ ಕುಟುಂಬಗಳನ್ನು ಮತ್ತೆ ಒಂದುಗೂಡಿಸುವಂತೆ ಅವರು ಒತ್ತಾಯಿಸಿದರು.

ನಾನು ಇಂದು ಮಾತನಾಡಿದ ತಾಯಂದಿರು ಏಕಾಂಗಿಯಾಗಿದ್ದಾರೆಂದು ಭಾವಿಸಿದ್ದಾರೆ. ಆದರೆ, ನಾವು ಅವರನ್ನು ಏಕಾಂಗಿ ಅಲ್ಲ ಅನ್ನುವುದನ್ನು ನೆನಪಿಸಬೇಕಿದೆ ಮತ್ತು ನಾವೆಲ್ಲರೂ ಅವರೊಂದಿಗೆ ನಿಂತಿದ್ದೇವೆ" ಎಂದು ಅವರು ಹೇಳಿದರು.

ಇದು ಮಾನವೀಯತೆ ವಿರುದ್ಧದ ಸಂಪೂರ್ಣ ಅಪರಾಧವಾಗಿದೆ. ಅಮೆರಿಕಾ ಸರ್ಕಾರ ಇದರಲ್ಲಿ ಭಾಗಿಯಾಗಿದ್ದು, ಕೂಡಲೇ ಇದನ್ನು ನಿಲ್ಲಿಸಬೇಕಾಗಿದೆ ಎಂದು ಹ್ಯಾರಿಸ್ ಬಂಧನ ಕೇಂದ್ರದ ಬಳಿ ನೆರೆದಿದ್ದ ನೂರಾರು ಮಂದಿಯನ್ನುದ್ದೇಶಿಸಿ ಮಾತನಾಡಿದರು.

ಮಕ್ಕಳನ್ನು ತಾಯಂದಿರಿಂದ ಬೇರ್ಪಡಿಸುವುದು, ಮಹಿಳೆಯರ ಮೇಲೆ ಹಲ್ಲೆ ನಡೆಸುವುದನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ತಮ್ಮ ಮಕ್ಕಳು ಏಲ್ಲಿದ್ದಾರೆ ಎಂಬುದು ಈ ಮಹಿಳೆಯರಿಗೆ ಗೊತ್ತಿಲ್ಲ. ಪೋನ್ ನಲ್ಲಿಯೂ ಮಾತನಾಡಲು ಅವರಿಗೆ ಸಾಧ್ಯವಾಗುತ್ತಿಲ್ಲ ಎಂದು ಅವರು ಹೇಳಿದರು.

ಬಂಧನ ಕೇಂದ್ರದ ಒಳಗೆ ಮೊಬೈನ್ ಪೋನ್ ಹಾಗೂ ಕ್ಯಾಮರಾಗಳ ಬಳಕೆಗೆ ಅವಕಾಶ ನೀಡುತ್ತಿಲ್ಲ ಎಂದು ಆರೋಪಿಸಿದ ಹ್ಯಾರಿಸ್, ಮಕ್ಕಳಿಂದ ಬೇರ್ಪಡಿಸಿ ತಾಯಂದಿರನ್ನು ಇಡಲಾಗಿದ್ದು, ಕಾರಾಗೃಹ ರೂಪದಲ್ಲಿ ಅವರನ್ನು ಇಡಲಾಗಿದೆ ಎಂದು ಆರೋಪಿಸಿದರು.

SCROLL FOR NEXT